ನವದೆಹಲಿ: ಕಾಶ್ಮೀರದಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೆಲ್ಲೆಟ್ ಗನ್ ಗಳನ್ನು ಬಳಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.
ರಬ್ಬರ್ ಪೆಲ್ಲೆಟ್ ಗಳಿಗೆ ವಿರೋಧ ವ್ಯಕ್ತವಾಗಿ ಒತ್ತಡ ಹೆಚ್ಚಾದ ಪರಿಣಾಮ, ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, 7 ಸದಸ್ಯರ ಸಮಿತಿಯನ್ನು ರಚಿಸಿದ್ದು ಪೆಲ್ಲೆಟ್ ಗನ್ ಗಳಿಗೆ ಪರ್ಯಾಯವಾದುದ್ದನ್ನು ಸೂಚಿಸಲು ಅನುಮತಿ ನೀಡಿದ್ದಾರೆ.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿವಿಎಸ್ ಎನ್ ಪ್ರಸಾದ್ ನೇತೃತ್ವದ ಸಮಿತಿ 2 ತಿಂಗಳ ಒಳಗಾಗಿ ಗೃಹ ಸಚಿವರಿಗೆ ವರದಿ ನೀಡಲಿದೆ. ಉಗ್ರನ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಭಾರತೀಯ ಸೇನೆ ಪ್ರತಿಭಟನಾಕಾರರ ವಿರುದ್ಧ ಹಾನಿಕಾರಕವಲ್ಲದ ಶಾಸ್ತ್ರವಾದ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡಿತ್ತು. ಪೆಲ್ಲೆಟ್ ಗುಂಡೇಟಿಗೆ ಗುರಿಯಾದವರಿಗೆ ದೃಷ್ಟಿದೋಷ ಉಂಟಾದ ಹಿನ್ನೆಲೆಯಲ್ಲಿ ಪೆಲ್ಲೆಟ್ ಗನ್ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪೆಲ್ಲೆಟ್ ಗನ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಗೃಹ ಸಚಿವ ರಾಜನಾಥ್ ಸಿಂಗ್ ಕಾಶ್ಮೀರ ಭೇಟಿ ವೇಳೆ ತಿಳಿಸಿದ್ದರು.