ದೇಶ

ಆಗಸ್ಟ್ ನಲ್ಲಿ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ: ಒಳನುಸುಳುವಿಕೆ, ಭಯೋತ್ಪಾದನೆ ಬಗ್ಗೆ ಚರ್ಚೆ ಸಾಧ್ಯತೆ

Srinivas Rao BV

ನವದೆಹಲಿ: ಸಾರ್ಕ್ ರಾಷ್ಟ್ರಗಳ ಗೃಹ ಸಚಿವರುಗಳ ಸಮ್ಮೇಳನದಲ್ಲಿ ಭಾಗವಹಿಸಲು ಮುಂದಿನ ತಿಂಗಳು ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನಡೆಯುತ್ತಿರುವ ಒಳನುಸುಳುವಿಕೆ, ಭಯೋತ್ಪಾದನೆ ವಿಷಯಗಳನ್ನು ಚರ್ಚಿಸಲಿದ್ದಾರೆ.

ಈ ಎರಡು ವಿಷಯಗಳನ್ನು ಪ್ರಸ್ತಾಪಿಸುವುದರೊಂದಿಗೆ, ಪಾಕಿಸ್ತಾನದ ನೆಲದಿಂದಲೇ ಭಾರತದ ಮೇಲಿನ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿವೆ ಎಂಬ ವಾಸ್ತವಾಂಶವನ್ನು ಪಾಕಿಸ್ತಾನಕ್ಕೆ ಮನವರಿಕೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ. ಇಸ್ಲಾಮಾಬಾದ್ ನಲ್ಲಿ ಎರಡು ದಿನಗಳು ಇರಲಿರುವ ರಾಜನಾಥ್ ಸಿಂಗ್, ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಲ್ಲಿ ನಡೆಯುತ್ತರಿಯುವ ಭಯೋತ್ಪಾದನೆ ಕುರಿತು ದಾಖಲೆಗಳನ್ನು ನೀಡಲಿದ್ದು ಪಾಕಿಸ್ತಾನ ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟಲು ಭಯೋತ್ಪಾದನಾ ಸಂಘಟನೆಗಳ ನಿರ್ಮೂಲನೆಗೆ ಒತ್ತಾಯಿಸಲಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಇನ್ನು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದಾರೆ, ಆದರೆ ಅಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿಲ್ಲ ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.

SCROLL FOR NEXT