ವಜಾಗೊಂಡ ಸಂಸದೆ ಶಶಿಕಲಾ ಪುಷ್ಪಾ
ನವದೆಹಲಿ: ಸರ್ಕಾರ ನನ್ನನ್ನು ರಕ್ಷಿಸುತ್ತದೆಯೇ? ನನಗೆ ರಕ್ಷಣೆ ಬೇಕು, ನನ್ನ ಜೀವಕ್ಕೆ ಬೆದರಿಕೆಯಿದೆ, ಇದು ತಮಿಳುನಾಡಿನ ಎಡಿಎಂಕೆ ಸಂಸದೆ ಶಶಿಕಲಾ ಪುಷ್ಪಾ ಸೋಮವಾರ ಸಂಸತ್ತಿನಲ್ಲಿ ಕಣ್ಣೀರು ಸುರಿಸಿ ನೀಡಿರುವ ಹೇಳಿಕೆ. ಇದಾದ ಕೆಲವೇ ಹೊತ್ತಿನಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಎಡಿಎಂಕೆ ಘೋಷಿಸಿತ್ತು.
ಕಳೆದ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷ ಡಿಎಂಕೆ ಸಂಸದ ಟ್ರಿಚಿ ಶಿವ ಅವರಿಗೆ ಕಪಾಳಮೋಕ್ಷ ಮಾಡಿದ ನಂತರ ವಿಮಾನದಿಂದ ಹೊರಹಾಕಲ್ಪಟ್ಟ ಶಶಿಕಲಾ ಪಕ್ಷದಿಂದಲೂ ಶಿಕ್ಷೆಗೊಳಗಾಗುವ ಭೀತಿಯಲ್ಲಿದ್ದರು. ನಾನು ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿದೆ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದರು.
ಪಕ್ಷಕ್ಕೆ ಅಪಕೀರ್ತಿ ತಂದ ಹಿನ್ನೆಲೆಯಲ್ಲಿ ಶಶಿಕಲಾ ಪುಷ್ಪಾ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಹೇಳಿದ್ದಾರೆ.
ಶಶಿಕಲಾ ಪುಷ್ಪಾ ಮತ್ತು ಟ್ರಿಚಿ ಶಿವಾ ಕಳೆದ ಶನಿವಾರ ಒಂದೇ ವಿಮಾನದಲ್ಲಿ ಭದ್ರತಾ ತಪಾಸಣೆ ವೇಳೆ ಅವಮಾನಕರ ರೀತಿಯಲ್ಲಿ ಜಗಳವಾಡಿದ್ದರು.
ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ತಮಿಳು ಭಾಷೆಯಲ್ಲಿ ಜಗಳ ಮಾಡಲು ಶುರು ಮಾಡಿದರು. ಆ ಕ್ಷಣದಲ್ಲಿ ಏನಾಗುತ್ತಿದೆಯೆಂದು ಯಾರಿಗೂ ಗೊತ್ತಾಗಲಿಲ್ಲ. ಕೂಡಲೇ ಪುಷ್ಪಾ ಅವರು ಸಂಸದ ಶಿವಾರಿಗೆ ಹೊಡೆಯಲು, ಒದೆಯಲು ಆರಂಭಿಸಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಶಿಕಲಾ ಪುಷ್ಪಾ, ತಮ್ಮ ಪಕ್ಷದ ನಾಯಕಿ ಜಯಲಲಿತಾ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಕ್ಕಾಗಿ ಸಹಿಸಲಾಗದೆ ಹೊಡೆದೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುವ ಹೊತ್ತಿಗೆ ಮಾತನಾಡಿದ ಶಶಿಕಲಾ ನಾಯಕರೊಬ್ಬರು ಸಂಸದನಿಗೆ ಹೊಡೆಯುತ್ತಾರೆಂದರೆ, ಏನು ಬೇಕಾದರೂ ನಡೆಯಬಹುದು. ನನಗೆ ಸರ್ಕಾರದ ರಕ್ಷಣೆ ಬೇಕು, ತಮಿಳುನಾಡಿನಲ್ಲಿ ನಾನು ಸುರಕ್ಷಿತವಾಗಿಲ್ಲ ಎಂದರು.
ಉಪ ಸಭಾಪತಿಗಳು ಕಲಾಪವನ್ನು ಮುಂದುವರಿಸಲು ಹೇಳಿದಾಗ, ವಿರೋಧ ಪಕ್ಷ ಕಾಂಗ್ರೆಸ್ ಶಶಿಕಲಾ ಪರವಾಗಿ ನಿಂತಿತು. ಸದನದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ನಾಳೆ ಯಾರಾದರೊಬ್ಬರ ಮನೆಯಲ್ಲಿ ಏನು ಬೇಕಾದರೂ ನಡೆಯಬಹುದು. ಶಶಿಕಲಾ ಅವರಿಗೆ ಸದನದಲ್ಲಿ ಮಾತನಾಡಲು ಬಿಟ್ಟಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ತಮ್ಮ ಭದ್ರತೆ ಬಗ್ಗೆ ಸದಸ್ಯರಿಗೆ ಏನಾದರೂ ಸಲಹೆಗಳನ್ನು ಕೊಡಬೇಕೆನಿಸಿದಲ್ಲಿ ಸಭಾಧ್ಯಕ್ಷರಿಗೆ ಬರೆಯಿರಿ ಎಂದರು.
ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ ಉಪ ಸಭಾಪತಿ ಪಿ.ಜೆ.ಕುರಿಯನ್, ಅಗತ್ಯವಾದದ್ದನ್ನು ನಾವು ಮಾಡುತ್ತೇವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಭಾಧ್ಯಕ್ಷರ ಪರವಾಗಿ ಈ ಸಂದರ್ಭದಲ್ಲಿ ನಾನು ಭರವಸೆ ನೀಡುತ್ತೇನೆ ಎಂದು ತಿಳಿಸಿದರು.