ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಜಾಫ್ರಿ ಕುಟುಂಬ
ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಗುರುವಾರ ನೀಡಿದ 2002ರ ಗೋದ್ರೋತ್ತರ ಹತ್ಯಾಕಾಂಡದ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಅಂದು ಹತ್ಯೆಗೀಡಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಜಾಫ್ರಿ ಅವರ ಕುಟುಂಬಸ್ಥರು ಹೇಳಿದ್ದಾರೆ...
ಅಹ್ಮದಾಬಾದ್: ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಗುರುವಾರ ನೀಡಿದ 2002ರ ಗೋದ್ರೋತ್ತರ ಹತ್ಯಾಕಾಂಡದ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಅಂದು ಹತ್ಯೆಗೀಡಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಜಾಫ್ರಿ ಅವರ ಕುಟುಂಬಸ್ಥರು ಹೇಳಿದ್ದಾರೆ.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಸಂಬಂಧ ಅಹ್ಮದಾಬಾದ್ ನ್ಯಾಯಾಲಯ ನೀಡಿರುವ ತೀರ್ಪು ತಮಗೆ ಸಮಾಧಾನ ತಂದಿದೆಯಾದರೂ ಸಾಕ್ಷ್ಯಾಧಾರತೆ ಕೊರತೆ ನೆಪವೊಡ್ಡಿ 36 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಸರಿಯಲ್ಲ, ಅವರಿಗೂ ಕೂಡ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ತಮ್ಮ ವಕೀಲರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಹೈಕೋರ್ಟ್ ನಲ್ಲಿ ಅಹ್ಮದಾಬಾದ್ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
2002ರಲ್ಲಿ ನಡೆದ ಗೋದ್ರೋತ್ತರ ಹತ್ಯಾಕಾಂಡದ ವೇಳೆ ಗುಲ್ಬರ್ಗ್ ಸೊಸೈಯಲ್ಲಿನ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರನ್ನು ಬಲವಂತವಾಗಿ ಹೊರಗೆಳೆದು ತಂದ ದುಷ್ಕರ್ಮಿಗಳು ಅವರನ್ನು ಜೀವಂತವಾಗಿಯೇ ಸುಟ್ಟುಹಾಕಿದ್ದರು. ಇಂದು ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ತೀರ್ಪಿನ ವಿರುದ್ಧ ಜಾಫ್ರಿ ಅವರ 77 ವರ್ಷದ ಪತ್ನಿ ಝಕಿಯಾ ಜಾಫ್ರಿ ಕಿಡಿಕಾರಿದ್ದಾರೆ. ತಮ್ಮ ಪತಿಯನ್ನು ಅಮಾನುಷವಾಗಿ ಹತ್ಯೆಗೈಯ್ಯಲಾಗಿತ್ತು. ಅರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಝಕಿಯಾ ಜಾಫ್ರಿ ಆಗ್ರಹಿಸಿದ್ದಾರೆ.
ಇದೇ ಜೂನ್ 6 ಸೋಮವಾರದಂದು ನ್ಯಾ.ಪಿಬಿ ದೇಸಾಯಿ ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡಲಿದ್ದಾರೆ.