ನವದೆಹಲಿ: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹಕ್ಕೆ ಸೇರ್ಪಡೆಯಾಗುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕ್ಷಿಪಣಿ ತಂತ್ರಜ್ಞಾನ ಪ್ರಸರಣ ತಡೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿಹಾಕಿದೆ.
ಕ್ಷಿಪಣಿ ತಂತ್ರಜ್ಞಾನವನ್ನು ವಿವೇಚನಾರಹಿತವಾಗಿ ಪ್ರಸರಣ ಮಾಡುವುದಕ್ಕೆ ಅಂಕುಶ ಹಾಕಲು ವಿಶ್ವ ಸಮುದಾಯ ಕೈಗೊಂಡಿರುವ ಕ್ರಮವನ್ನು ಭಾರತ ಸರ್ಕಾರ ಬೆಂಬಲಿಸಿದ್ದು ಜಾಗತಿಕ ನಿಲುವಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಜೂ.4 ರಿಂದ ಅಮೆರಿಕ ಸೇರಿದಂತೆ 5 ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲೇ ಕ್ಷಿಪಣಿ ತಂತ್ರಜ್ಞಾನ ಪ್ರಸರಣ ತಡೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿರುವುದು ಪರಮಾಣು ಪೂರೈಕೆದಾರ ಸಮೂಹಕ್ಕೆ ಭಾರತ ಸೇರ್ಪಡೆಯಾಗುವ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಷಿಪಣಿ ಪ್ರಸರಣ ತಡೆಗಾಗಿ 2002 ರಲ್ಲಿ ರೂಪಿಸಲಾಗಿದ್ದ ಹೇಗ್ ನಿಯಮಾವಳಿಗೆ ಭಾರತ ಸಹಿ ಹಾಕಿರುವುದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ. ಹೇಗ್ ನಿಯಮಾವಳಿ ವಿಶ್ವಾಸವೃದ್ಧಿಯ ಜತೆಗೆ ಪಾರದರ್ಶಕತೆ ಮೂಡಿಸುವ ಕ್ರಮವಾಗಿದೆ.