ಅಮ್ರೋಹ: ಮಥುರಾ ಹಿಂಸಾಚಾರದ ಹಿಂದೆ ಪಿತೂರಿ ನಡೆಸಿರುವ ಸಾಧ್ಯತೆಯಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ನಿಜಕ್ಕೂ ಘಟನೆಯನ್ನು ಆಮೂಲಾಗ್ರದಿಂದ ತನಿಖೆ ನಡೆಸಲು ಬಯಸುತ್ತಿದ್ದರೆ ಅದು ಸಿಬಿಐ ತನಿಖೆಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಅವರು ಹೇಳಿದರು.
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಥುರಾ ಹಿಂಸಾಚಾರ ಸಾಮಾನ್ಯ ಘಟನೆಯಲ್ಲ. ಉತ್ತರ ಪ್ರದೇಶ ಸರ್ಕಾರ ನಮಗೆ ಸಿಬಿಐ ತನಿಖೆ ನಡೆಸಿ ಎಂದು ಕೋರಿದರೆ ಖಂಡಿತಾ ನಾವು ಅದಕ್ಕೆ ಒಪ್ಪುತ್ತೇವೆ ಎಂದರು.
ಹಿಂಸಾಚಾರದ ಹಿಂದೆ ಯಾರೋ ಪಿತೂರಿ ನಡೆಸಿರುವ ಸಾಧ್ಯತೆ ಕಂಡುಬರುತ್ತಿದೆ. ಇಡೀ ಪ್ರಕರಣದಲ್ಲಿ ಏನೋ ಮುಚ್ಚಿಡಲಾಗಿದೆ. ಈ ಘಟನೆ ನಡೆದಿರುವುದೇ ವಿಚಿತ್ರವಾಗಿದೆ. ಉತ್ತರ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಾಗುವುದಿಲ್ಲ ಎಂದು ಹೇಳಿದರು.
ಈ ನಡುವೆ ಮೊನ್ನೆ ಘರ್ಷಣೆ ನಡೆದ ಜವಾಹರ್ ಬಾಗ್ ನಲ್ಲಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಸಾವಿಗೀಡಾದವರ ಸಂಖ್ಯೆ 29ಕ್ಕೇರಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು 45 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮಥುರಾ ಹಿಂಸಾಚಾರದಲ್ಲಿ ಸಾವಿಗೀಡಾದ ಎಸ್ ಪಿ ಮುಕುಲ್ ದ್ವಿವೇದಿ ಮತ್ತು ಎಸ್ ಎಚ್ ಒ ಸಂತೋಷ್ ಯಾದವ್ ಅವರ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪೊಲೀಸರು ಮತ್ತು ರಾಜ್ಯ ಸರ್ಕಾರಿ ನೌಕರರು ವಾಗ್ದಾನ ಮಾಡಿದ್ದಾರೆ.