ತಿರುವನಂತಪುರ: ನೈಋತ್ಯ ಮುಂಗಾರು ಮಾರುತಗಳು ಮಂಗಳವಾರ ತಡರಾತ್ರಿ ಕೇರಳ ಪ್ರವೇಶ ಮಾಡಿದ್ದು, ತಮಿಳುನಾಡು ಮತ್ತು ಕೇರಳ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿ ಕೆ ಸಂತೋಷ್ ಅವರು, ನೈಋತ್ಯ ಮುಂಗಾರು ಮಾರುತಗಳು ಕೇರಳ ಮತ್ತು ಲಕ್ಷದ್ವೀಪ ಪ್ರವೇಶಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕೇಂದ್ರ ಹವಾಮಾನ ಇಲಾಖೆ ಜೂನ್ 9ಕ್ಕೆ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶ ಮಾಡಲಿವೆ ಎಂದು ಹೇಳಿತ್ತು. ಆದರೆ ಎರಡು ದಿನ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶ ಮಾಡಿದ್ದು, ಈ ಭಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಕೇರಳದ ಕರಾವಳಿ ತೀರದಲ್ಲಿರುವ ಅರಬ್ಬೀ ಸಮುದ್ರದಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಿದ್ದು, ಕೇರಳ-ಕರ್ನಾಟಕ ಮತ್ತು ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಇನ್ನು ಕೇರಳದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕೇರಳದ ಇಡುಕ್ಕಿಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿದ ಪರಿಣಾಮ 36 ವರ್ಷದ ವ್ಯಕ್ತಿ ಮಣ್ಣಿನ ಅವಶೇಷಗಳಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಸ್ಥಳೀಯ ಎಸ್ ಎಫ್ ಐ ಸಂಘಟನೆಯ ಮುಖ್ಯಸ್ಥ ಜೋಬಿ ಜಾನ್ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಮಲಗಿದ್ದ ವೇಳೆ ಭೂಕುಸಿತ ಉಂಟಾಗಿ ಮನೆಯ ಮೇಲೆ ಕಲ್ಲು ಮತ್ತು ಮಣ್ಣು ಬಿದ್ದ ಪರಿಣಾಮ ಜಾನ್ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಜಾನ್ ಅವರ ತಂದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
48 ಗಂಟೆಗಳಲ್ಲಿ ರಾಜ್ಯ ಪ್ರವೇಶಿಸಲಿರುವ ಮಾನ್ಸೂನ್ ಮಾರುತಗಳು
ಇನ್ನು ಕೇಂದ್ರ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಂತೆ ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ಮಾರುತಗಳು ಕರ್ನಾಟಕದ ಕರಾವಳಿ ತೀರ ಪ್ರದೇಶವನ್ನು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲಿ ಇದರ ಪರಿಣಾಮ ಗೋಚರಿಸುತ್ತಿದ್ದು, ಕರಾವಳಿ ತೀರದ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾತ್ರಿ ವೇಳೆ ಸಮುದ್ರಕ್ಕೆ ಇಳಿಯದಂತೆ ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ಕರಾವಳಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.