ದೇಶ

ಡ್ಯಾನಿಶ್ ಮಹಿಳೆ ಮೇಲೆ ಗ್ಯಾಂಗ್ ರೇಪ್: ಆರೋಪಿಗಳಿಗೆ ನಾಳೆ ಶಿಕ್ಷೆ ಪ್ರಕಟ

Lingaraj Badiger
ನವದೆಹಲಿ: ಎರಡು ವರ್ಷಗಳ ಹಿಂದೆ 52 ವರ್ಷದ ಡ್ಯಾನಿಶ್ ಮಹಿಳೆಯೊಬ್ಬರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧದ ಆರೋಪ ಸಾಬೀತಾಗಿದ್ದು, ದೆಹಲಿ ಕೋರ್ಟ್ ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಅಂತಿಮ ವಿಚಾರಣೆ ನಡೆಯಿತು. ಈ ವೇಳೆ ದೆಹಲಿ ಪೊಲೀಸರು ಐವರು ಆರೋಪಿಗಳಿಗೆ ಜೀವನ ಪರಿಯಂತ ಜೈಲು ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. 
ಇದೊಂದು ಘೋರ ಮತ್ತು ಹೀನ ಕೃತ್ಯವಾಗಿದೆ ಮತ್ತು ಘಟನೆಯಿಂದಾಗಿ ದೇಶದ ಗೌರವಕ್ಕೂ ಧಕ್ಕೆಯಾಗಿದೆ. ಹೀಗಾಗಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲ ದಿನೇಶ್ ಶರ್ಮಾ ಅವರು, ಆರೋಪಿಗಳು ಕೇವಲ 20 ವರ್ಷದವರಾಗಿದ್ದು, ಬಡವರಾಗಿದ್ದಾರೆ. ಹೀಗಾಗಿ ಗರಿಷ್ಠ 20 ಜೈಲು ಶಿಕ್ಷೆ ಸಾಕು ಎಂದು ಮನವಿ ಮಾಡಿದರು,
ವಾದ ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಮೇಶ್ ಕುಮಾರ್ ಅವರು ತೀರ್ಪನ್ನು ನಾಳೆ ಕಾಯ್ದಿರಿಸಿದರು.
ಜನವರಿ 14 ,2014 ರಲ್ಲಿ ಈ ಐವರು ಡ್ಯಾನಿಶ್ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದಲ್ಲದೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
SCROLL FOR NEXT