ನವದೆಹಲಿ: ರಾಜಧಾನಿ ದೆಹಲಿಯ ರೆಸ್ಟೋರೆಂಟ್ ಒಂದು ಬೀದಿ ಮಕ್ಕಳಿಗೆ ಊಟ ನೀಡಲು ನಿರಾಕರಿಸಿ ದುರ್ವತನೆ ತೋರಿದ ಪ್ರಕರಣವನ್ನು ಭಾನುವಾಹ ದೆಹಲಿ ಸರ್ಕಾರ ತನಿಖೆಗೆ ಆದೇಶಿಸಿದೆ.
ಪ್ರಕರಣ ಕುರಿತಂತೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಇಂತಹ ಮನಸ್ಥಿತಿಯನ್ನು ಎಂದಿಗೂ ಪ್ರೋತ್ಸಾಹಿಸಬಾರದು. ಪ್ರಕರಣ ತನಿಖೆ ನಡೆಸಿ 24 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ದೆಹಲಿಯ ಶಿವಸಾಗರ್ ಹೋಟೆಲ್ ಗೆ ಬಂದಿದ್ದ ಬೀದಿ ಮಕ್ಕಳಿಗೆ ರೆಸ್ಟೋರೆಂಟ್ ಸಿಬ್ಬಂದಿಗಳು ಆಹಾರ ನೀಡಲು ನಿರಾಕರಿಸಿದ್ದರು. ಅಲ್ಲದೆ, ಮಕ್ಕಳನ್ನು ಹೊರಗೆ ಹಾಕಲು ಯತ್ನಿಸಿದ್ದರು ಎಂದು ಹೇಳಿ ಸೋನಾಲಿ ಎಂಬ ಮಹಿಳೆ ಪ್ರಕರಣ ದಾಖಲಿಸಿದ್ದರು.
ಮಕ್ಕಳಿಗೆ ಸೇವೆ ನೀಡಲು ಹೋಟೆಲ್ ಸಿಬ್ಬಂದಿಗಳು ನಿರಾಕರಿಸಿದ್ದರು. ಅಲ್ಲದೆ, ಮಕ್ಕಳನ್ನು ಹೊರತಬ್ಬಲು ಯತ್ನಿಸಿದ್ದರು. ಇದನ್ನು ಪ್ರಶ್ನಿಸಿದ ನನ್ನ ವಿರುದ್ಧವೂ ಹರಿಹಾಯ್ದಿದ್ದರು. ಹೋಟೆಲ್ ಜಾಗ ಬಿಟ್ಟು ಹೊರಹೋಗಲಿದ್ದರೆ ಗುಂಡು ಹಾರಿಸುತ್ತೇವೆಂದು ಬೆದರಿಸಿದರು. ಬೆದರಿಕೆ ಹಾಕಿದರೂ ಸ್ಥಳಬಿಟ್ಟು ನಾನು ಹೋಗಲಿಲ್ಲ.
ಮಕ್ಕಳು ಸರಿಯಾದ ರೀತಿಯಲ್ಲಿ ಬಟ್ಟೆಹಾಕಿಲ್ಲ. ಕೊಳಕು ಬಟ್ಟೆ ಧರಸಿದ್ದಾರೆಂಬ ಕಾರಣಕ್ಕೆ ಮಕ್ಕಳನ್ನು ಹೋಟೆಲ್ ನಲ್ಲಿ ಕೂರಲು ಬಿಡಲಿಲ್ಲ. ಹೋಟೆಲ್ ಗೆ ಯಾರೇ ಬಂದರೂ ಅವರಿಗೆ ಸೇವೆ ಸಲ್ಲಿಸುವುದು ಹೋಟೆಲ್ ಸಿಬ್ಬಂದಿಗಳ ಹಾಗೂ ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಹೀಗಿದ್ದರೂ ಹೋಟೆಲ್ ಮಾಲೀಕ ತಾರತಮ್ಯ ಮಾಡಿದ್ದರು. ಹೋಟೆಲ್ ನ ಮಾಲೀಕ, ಸಿಬ್ಬಂದಿಗಳ ದುರ್ವತನೆಗೆ ವಿರುದ್ಧ ಪ್ರತಿಭಟಿಸಿದೆ ಎಂದು ಸೋನಾಲಿ ಹೇಳಿಕೊಂಡಿದ್ದಾರೆ.
ಅಲ್ಲದೆ, ರೆಸ್ಟೋರೆಂಟ್ ಗೆ ಇಂದೂ ಸಹ ಮತ್ತಷ್ಟು ಬೀದಿ ಮಕ್ಕಳೊಂದಿಗೆ ಹೋಗಲು ನಿರ್ಧರಿಸಿದ್ದು, ಹೋಟೆಲ್ ಮುಂಬಾಗಿಲಿನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಪ್ರತಿಭಟನೆ ನಡೆಸುತ್ತೇನೆಂದು ಅವರು ಹೇಳಿದ್ದಾರೆ.
ಇನ್ನು ಸೋನಾಲಿಯವರ ಈ ಆರೋಪವನ್ನು ತಳ್ಳಿ ಹಾಕಿರುವ ಹೋಟೆಲ್ ಮಾಲೀಕರು, ಆರೋಪ ಸತ್ಯಕ್ಕೆ ದೂರವಾದದ್ದು, ಹೋಟೆಲ್ ನಲ್ಲಿ ನಡೆದ ಘಟನೆ ರೆಕಾರ್ಡ್ ಆಗಿದೆ. ಮಕ್ಕಳಿಗೆ ಸೇವೆ ನೀಡಲು ಸಾಧ್ಯವಿಲ್ಲ ಎಂದು ನಾವು ಹೇಳಿಯೇ ಇಲ್ಲ. ಹೋಟೆಲ್ ಒಳಗೆ ಬರಲು ಮಕ್ಕಳಿಗೆ ಅನುಮತಿ ನೀಡಲಾಗಿತ್ತು. ಹೋಟೆಲ್ ಒಳಗೆ ಬರುತ್ತಿದ್ದಂತೆ ಮಕ್ಕಳು ಕಿರಚಾಡಲು ಆರಂಭಿಸಿದ್ದರು. ಇದರಿಂದ ಇತರ ಗ್ರಾಹಕರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಮಕ್ಕಳಿಗೆ ಸೇವೆ ನೀಡಲು ನಿರಾಕರಿಸಿದೆವು. ಇತರೆ ಗ್ರಾಹಕರಿಗೆ ಸಮಸ್ಯೆಯಾಗುತ್ತಿದ್ದರೆ ಸೇವೆ ನಿರಾಕರಿಸಲು ನಮಗೆ ಹಕ್ಕು ಇದೆ ಎಂದು ಹೇಳಿದ್ದಾರೆ.