ದೇಶ

ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ ಕಮಲ್ ನಾಥ್ ಗೆ ಕಾಂಗ್ರೆಸ್ ನಿಂದ ಪುರಸ್ಕಾರ: ಆಮ್ ಆದ್ಮಿ ಪಕ್ಷ

Srinivas Rao BV

ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಕಮಲ್ ನಾಥ್ ಅವರನ್ನು ಪಂಜಾಬ್ ನ ಉಸ್ತುವಾರಿಯಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಉಡುಗೊರೆ ನೀಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಸಿಖ್ ವಿರೋಧಿ ದಂಗೆಯ ವೇಳೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಆದೇಶವನ್ನು ಪಾಲಿಸಿದ್ದಕ್ಕಾಗಿ ಕಮಲ್ ನಾಥ್ ಅವರಿಗೆ ಕಾಂಗ್ರೆಸ್ ಪಕ್ಷ  ಪಂಜಾಬ್ ನ ಕಾಂಗ್ರೆಸ್ ಉಸ್ತುವಾರಿ ನೀಡುವ ಮೂಲಕ ಕಮಲ್ ನಾಥ್ ಅವರನ್ನು  ಪುರಸ್ಕರಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ, ವಕೀಲ ಹೆಚ್ ಎಸ್ ಫೋಲ್ಕಾ ಆರೋಪಿಸಿದ್ದಾರೆ.
1984 ರ ಅಕ್ಟೋಬರ್ 31 ರಂದು ಸಿಖ್ ಸಮುದಾಯಕ್ಕೆ ಸೇರಿದ ಅಂಗರಕ್ಷಕರಿಂದ ನಡೆದ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕವಾಗಿ ಸಿಖ್ ವಿರೋಧಿ ದಂಗೆ ನಡೆದಿತ್ತು. ಈ ದಂಗೆಯಲ್ಲಿ ಕಮಲ್ ನಾಥ್ ಅವರ ಹೆಸರು ಪದೇ ಪದೇ ಪ್ರಸ್ತಾಪವಾಗಿದ್ದರೂ ಸಹ ಹೇಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಫೋಲ್ಕಾ ಪ್ರಶ್ನಿಸಿದ್ದಾರೆ.
ಸಿಖ್ ವಿರೋಧಿ ದಂಗೆ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಗುರುದ್ವಾರ ರಾಕಬ್ ಗಂಜ್ ಬಳಿ ಇದ್ದ ಬಗ್ಗೆ ಸ್ಪಷ್ಟ ವರದಿಗಳಿವೆ. ದಂಗೆ ನಡೆಯುತ್ತಿದ್ದಾಗ ಅವರು ಅಲ್ಲೇನು ಮಾಡುತ್ತಿದ್ದರು? ಒಂದು ವೇಳೆ ಗುರುದ್ವಾರವನು ರಕ್ಷಿಸುವುದು ಅವರ ಉದ್ದೇಶವಾಗಿದ್ದಿದ್ದರೆ ಸಿಖ್ ಸಂತ್ರಸ್ತರಿಗೆ ಏಕೆ ಸಹಾಯ ಮಾಡಲಿಲ್ಲ ಎಂದು ಫೋಲ್ಕಾ ಪ್ರಶ್ನಿಸಿದ್ದಾರೆ.

SCROLL FOR NEXT