ನವದೆಹಲಿ: ಆಮ್ ಆದ್ಮಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಪಕ್ಷದ ವಕ್ತಾರೆ ಅಲಕಾ ಲಂಬಾ ಅವರನ್ನು ಆಪ್ ಪಕ್ಷದ ವಕ್ತಾರ ಸ್ಥಾನದಿಂದ ಗುರುವಾರ ವಜಾಗೊಳಿಸಲಾಗಿದೆ.
ಇತ್ತೀಚೆಗಷ್ಟೇ ಪ್ರೀಮಿಯಂ ಬಸ್ ಸೇವೆ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಸಲ್ಲಿಸಿದ್ದ ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರಿಗೆ ಅಲಕಾ ಲಂಬಾ ಅವರು ಬೆಂಬಲ ಸೂಚಿಸಿದ್ದರು. ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಯ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದರು.
ಗೋಪಾಲ್ ರಾಯ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಆಪ್ ಹೇಳುತ್ತಿದೆ. ನಿಜ ಹೇಳಬೇಕಾದರೆ ಮುಖ್ಯಮಂತ್ರಿ ಕೇಜ್ರಿಲಾಲ್ ಅವರು ನ್ಯಾಯೋಚಿತ ತನಿಖೆ ಬಯಸುತ್ತಿದ್ದು, ಇದಕ್ಕಾಗಿ ಗೋಪಾಲ್ ರಾಯ್ ಅವರು ರಾಜೀನಾಮೆ ಸಲ್ಲಿಸುವಂತೆ ಸೂಚಿದ್ದರು ಎಂದು ಹೇಳಿದ್ದರು.
ಲಂಬಾ ಆವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಮ್ ಆದ್ಮಿ ಪಕ್ಷವು ಇದೀಗ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಅವರನ್ನು ವಕ್ತಾರೆ ಸ್ಥಾನದಿಂದ ವಜಾಗೊಳಿಸಿದೆ.
ಇನ್ನು ತಮ್ಮ ವಜಾ ಆದೇಶ ಸುದ್ದು ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಲಕಾ ಲಂಬಾ ಅವರು, ಪಕ್ಷಕ್ಕೆ ನಾನು ಶಿಸ್ತಿನ ಕೆಲಸಗಾರರಳಾಗಿದ್ದೆ. ಇಂದು ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ತಲೆ ಬಾಗುತ್ತೇನೆ. ತಿಳಿಯದೆಯೇ ನನ್ನಿಂದ ಏನೇ ತಪ್ಪಾಗಿದ್ದರೂ, ಅದಕ್ಕೆ ಶಿಕ್ಷೆ ಅನುಭವಿಸಲು ನಾನು ಸಿದ್ಧಳಿದ್ದೇನೆಂದು ಹೇಳಿಕೊಂಡಿದ್ದಾರೆ.