ನವದೆಹಲಿ: ಟಿಆರ್ ಎಸ್ ಸುಬ್ರಹ್ಮಣ್ಯನ್ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸುಗಳನ್ನು ಜಾರಿಗೆ ತಂದರೆ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಂದರೆ, ಇಂತಹದ್ದೇ ದಿನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬೇಕೆಂದು ದಿನಾಂಕ ನಿಗದಿ ಮಾಡುವ ಬದಲು ಪರೀಕ್ಷೆ ಬರೆಯುವ ದಿನವನ್ನು ವಿದ್ಯಾರ್ಥಿಗಳ ಆಯ್ಕೆಗೇ ಬಿಡುವುದು ಸೂಕ್ತ ಎಂದು ಸಮಿತಿ ಶಿಫಾರಸು ಮಾಡಿದೆ.
ಟಿಎಸ್ಆರ್ ಸಮಿತಿ ವರದಿಯನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಎಲ್ಲಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದ ನಂತರವೇ ವರದಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಹೇಳಿದ್ದರು.
ಟಿಎಸ್ ಆರ್ ಸಮಿತಿ ವರದಿಯಲ್ಲಿ ಶಿಫಾರಸು ಮಾಡಲಾಗಿರುವ ಕೆಲವು ಅಂಶಗಳು ಇಂತಿವೆ:
1. 10ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸುವುದು: ಭಾಗ ಎ ಮತ್ತು ಭಾಗ ಬಿ.
2. ಭಾಗ ಎ ಪರೀಕ್ಷೆ ಉನ್ನತ ಮಟ್ಟದ್ದಾಗಿರುತ್ತದೆ ಮತ್ತು ಭಾಗ ಬಿ ಪರೀಕ್ಷೆ ಸ್ವಲ್ಪ ಸುಲಭದ್ದಾಗಿರುತ್ತದೆ. 10ನೇ ತರಗತಿ ಬಳಿಕ ಗಣಿತ ವಿಷಯವನ್ನು ಅಧ್ಯಯನ ಮಾಡಲು ಇಚ್ಛಿಸದ ವಿದ್ಯಾರ್ಥಿಗಳು ಭಾಗ ಬಿ ಪರೀಕ್ಷೆಗೆ ಮಾತ್ರ ಹಾಜರಾಗಬಹುದು. ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಸಿಲೆಬಸ್ ಆದರೂ ಕೂಡ ಭಾಗ ಬಿ ವಿದ್ಯಾರ್ಥಿಗಳ ಗಣಿತ ಮತ್ತು ವಿಜ್ಞಾನ ಪರೀಕ್ಷೆಗಳು ಭಾಗ ಎಗಿಂತ ಕಡಿಮೆ ಮಟ್ಟದ್ದಾಗಿರುತ್ತದೆ.
3. ವಿದ್ಯಾರ್ಥಿಗಳಿಗೆ ಯಾವ ವಿಷಯವನ್ನು ಕಲಿಯಬೇಕು ಎಂಬ ಸ್ವಾತಂತ್ರ್ಯವಿರಬೇಕು. ಭಾಗ ಬಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮುಂದಿನ ಕೋರ್ಸ್ ಗಳಲ್ಲಿ ಅತ್ಯುನ್ನತ ಮಟ್ಟದ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕಲಿಯುವ ಅರ್ಹತೆ ಕಡಿಮೆಯಿರುತ್ತದೆ.
4. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧಾರವಾಗಿಟ್ಟುಕೊಂಡು ಮುಂದೆ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆಯುವಂತಹ ನಿಯಮ ಜಾರಿಗೆ ತರಬೇಕು. ಇದರಿಂದ ವಿದ್ಯಾರ್ಥಿಗಳು ಅನೇಕ ಪ್ರವೇಶ ಪರೀಕ್ಷೆ ಬರೆಯುವ ಅವಶ್ಯಕತೆಯಿರುವುದಿಲ್ಲ.
5. ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲಿನ ಒತ್ತಡ ಕಡಿಮೆ ಮಾಡಲು, ವಿದ್ಯಾರ್ಥಿಗಳಿಗೇ ಪರೀಕ್ಷೆಯ ದಿನಾಂಕ ಆಯ್ಕೆ ವ್ಯವಸ್ಥೆ ಉತ್ತಮವಾಗಿದ್ದು, ಯಾವುದೇ ಬೋರ್ಡ್ ನಿಂದ 12ನೇ ತರಗತಿ ಪಾಸಾದ ನಂತರ ಪ್ರತಿ ವಿದ್ಯಾರ್ಥಿಯು ರಾಷ್ಟ್ರೀಯ ಮಟ್ಟದ ಪರೀಕ್ಷೆ ಬರೆಯುವಂತೆ ಶಿಫಾರಸು ಮಾಡಿದೆ.
6. ಪ್ರಸ್ತುತ ಇರುವ ಮೌಲ್ಯಮಾಪನ ಪದ್ಧತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಮಿತಿ, ಗ್ರೇಸ್ ಅಂಕಗಳನ್ನು ನೀಡುವುದನ್ನು ತೆಗೆದುಹಾಕಬೇಕೆಂದು ಹೇಳಿದೆ. ಅಂಕಗಳನ್ನು ನೀಡಿ ಶೇಕಡಾವಾರು ಅಂಕ ನೀಡುವುದು ಉತ್ತಮ ಎಂದು ಹೇಳಿದೆ.
7.ಪ್ರತಿ ವಾರ್ಷಿಕ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೌಲ್ಯಮಾಪನದ ಮಾನದಂಡಗಳು ಮತ್ತು ಸಾಧನೆ ವಿಶ್ಲೇಷಣೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿ ಸಾರ್ವಜನಿಕವಾಗಿ ದೊರಕುವಂತೆ ಮಾಡಬೇಕು.
8.ಸ್ಮರಣೆ ಮತ್ತು ಮರು ಸ್ಮರಣೆ ಮಾಡಿಕೊಳ್ಳುವುದು ಅಧ್ಯಯನದ ಒಂದು ಆಂತರಿಕ ಭಾಗವಾಗಿದ್ದರೂ ಕೂಡ, ಪಠ್ಯಪುಸ್ತಕದಲ್ಲಿರುವುದನ್ನು ಹೇಳುವುದರ ಬದಲು ಅರ್ಥವಾಗುವಂತೆ ಹೇಳಿಕೊಡುವುದು ಬೋಧನೆಯ ಮುಖ್ಯ ಉದ್ದೇಶವಾಗಬೇಕು.
9.ಪೂರ್ವ ಪ್ರಾಥಮಿಕ ಹಂತಕ್ಕೆ ಶಿಕ್ಷಣ ಹಕ್ಕು ಕಾಯ್ದೆಯನ್ನು ವಿಸ್ತರಿಸಬೇಕು. ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು 10ನೇ ತರಗತಿಯವರೆಗೆ ವಿಸ್ತರಿಸಬೇಕು
10.ಶಿಕ್ಷಕರ ತರಬೇತಿ, ಬೋಧನೆಯಲ್ಲಿ ಆಂತರಿಕ ಕೋರ್ಸ್ ಗಳನ್ನು 12ನೇ ತರಗತಿಯಲ್ಲಿ ಗರಿಷ್ಟ ಅಂಕ ಗಳಿಸಿದವರಿಗೆ ನೀಡುವ ಪ್ರಾಯೋಜಿತ ಕೋರ್ಸ್ ಗಳನ್ನು ಜಾರಿಗೆ ತರಬೇಕೆಂದು ಕೂಡ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.