ಹೈದರಾಬಾದ್: ಬಹುತ್ವ ಹಾಗೂ ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಭಾರತದಂತಹ ರಾಷ್ಟ್ರಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ಸಮಾನ ನಾಗರಿಕ ಸಂಹಿತೆ ಜಾರಿಯ ಕುರಿತು ಪ್ರಶ್ನಿಸಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಸಾವುದ್ದೀನ್ ಒವೈಸಿ, ಹಿಂದೂ ಅವಿಭಜಿತ ಕುಟುಂಬಗಳ ತೆರಿಗೆ ರಿಯಾಯಿತಿಯನ್ನು ಬಿಟ್ಟುಕೊಡಲು ಸಂಘ ಪರಿವಾರ ಸಿದ್ಧವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಭಾರತದ ಸಂವಿಧಾನದಲ್ಲಿ 16 ಮಾರ್ಗದರ್ಶಿ ತತ್ವಗಳಿದ್ದು ಮದ್ಯ ನಿಷೇಧವೂ ಅದರಲ್ಲಿ ಸೇರ್ಪಡೆಯಾಗಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮದ್ಯ ನಿಷೇಧದ ಬಗ್ಗೆ ಚರ್ಚಿಸಿ, ಅದನ್ನು ಜಾರಿಗೊಳಿಸಬಾರದೇಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಒವೈಸಿ ಪ್ರತಿ ಪ್ರಶ್ನೆ ಹಾಕಿದ್ದಾರೆ.
ಮದ್ಯ ಸೇವನೆಯಿಂದ ಹಲವು ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಆದ್ದರಿಂದ ಸಂವಿಧಾನದಲ್ಲಿ ಹೇಳಿರುವಂತೆ ಮದ್ಯ ನಿಷೆಧವೇಕೆ ಮಾಡಬಾಡಬಾರದು ಎಂದು ಒವೈಸಿ ಪ್ರಶ್ನಿಸಿದ್ದಾರೆ. ಇಂತಹ ಅನೇಕ ಸಂಗತಿಗಳು ಸವಾಲಾಗಿದ್ದು ಭಾರತದಂತಹ ರಾಷ್ಟ್ರಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.