ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ದೇವರು ನೀಡಿದ ಉಡುಗೊರೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತೊಮ್ಮೆ ಮೋದಿ ಅವರನ್ನು ಹೊಗಳಿ ಹೇಳಿಕೆ ನೀಡಿದ್ದಾರೆ.
ಮೋದಿ ಎಂದರೆ ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ ಎಂದು ವೆಂಕಯ್ಯ ನಾಯ್ಡು ಬಣ್ಣಿಸಿದ್ದು ಇದು ಜನರಿಗೂ ಅರ್ಥವಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅಭಿವೃದ್ಧಿಗೊಳಿಸುವ ಧ್ಯೇಯ ಹೊಂದಿದ್ದಾರೆ, ಮೋದಿ ಎಂದರೆ ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ ಎಂದು ಜನರಿಗೂ ಅರ್ಥವಾಗಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಯೋಗ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮ್ ದೇವ್ ಅವರೊಂದಿಗೆ ಭಾಗವಹಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದ ಸ್ವಚ್ಛ ಭಾರತ ಅಭಿಯಾನ ಇಂದು ಜನರ ಚಳುವಳಿಯಾಗಿದೆ ಎಂದಿದ್ದು, ಬಾಬಾ ರಾಮ್ ದೇವ್ ಅವರನ್ನೂ ಹೊಗಳಿದ್ದಾರೆ. ಬಾಬಾ ರಾಮ್ ದೇವ್ ಅವರನ್ನು ನಿಜವಾದ ಸಂತ ಎಂದು ಬಣ್ಣಿಸಿರುವ ವೆಂಕಯ್ಯ ನಾಯ್ಡು, ಆಧುನಿಕ ಪೀಳಿಗೆಗೆ ಭಾರತದ ಪ್ರಾಚೀನ ಸಂಸ್ಕೃತಿಯನ್ನು ತಲುಪಿಸುವುದು ಸಣ್ಣ ಕೆಲಸವಲ್ಲ, " ನಾನು ಬಾಬ ರಾಮ್ ದೇವ್ ಅವರೊಂದಿಗೆ ಹೋದಲ್ಲೆಲ್ಲಾ ಜನರು ರಾಮ್ ದೇವ್ ಅವರಿಂದ ಯೋಗ ಕಲಿಯಲು ಹಂಬಲಿಸುತ್ತಾರೆ, ಬಾಬಾ ರಾಮ್ ದೇವ್ ಓರ್ವ ನಿಜವಾದ ಋಷಿ, ಸಂತ ಎಂದು ಹೇಳಿದ್ದಾರೆ.