ಕೈರಾನ: ಉತ್ತರ ಪ್ರದೇಶದ ಕೈರಾನದಲ್ಲಿ ಹಿಂದೂಗಳ ಸಾಮೂಹಿಕ ವಲಸೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿದ್ದರೆ, ಕೈರಾಣ ವಲಸೆ ಪ್ರಕರಣವನ್ನು ಕೋಮು ಭಾವನೆಗಳ ಲಾಭ ಪಡೆಯಲು ಯತ್ನಿಸುತ್ತಿರುವುದಕ್ಕೆ ಬಿಜೆಪಿಯ ಬಗ್ಗೆ ಹಿಂದೂ ಸಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ, ಸ್ವಾಮಿ ಚಿನ್ಮಯಾನಂದ, ಆಚಾರ್ಯ ಪ್ರಮೋದ್ ಕೃಷ್ಣನ್, ನಾರಾಯಣ್ ಗಿರಿ, ಸ್ವಾಮಿ ಕಲ್ಯಾಣ್ ದೇವ್ ಜಿ ಮಹಾರಾಜ್ ಅವರು ಕೈರಾನದಲ್ಲಿರುವ ಹಿಂದೂಗಳನ್ನು ಭೇಟಿ ಮಾಡಿದ್ದು, ಸಾಮೂಹಿಕ ವಲಸೆ ಹಿಂದಿನ ಕಾರಣವನ್ನು ತಿಳಿಯಲು ಯತ್ನಿಸಿದ್ದಾರೆ.
ಕೈರಾನಾದ ಹಿಂದೂ ಕುಟುಂಬಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ವಾಮಿ ಚಕ್ರಪಾಣಿ, ಕೈರಾಣ ಸಮಸ್ಯೆಗೆ ಧಾರ್ಮಿಕ ನಂಟು ಕಲ್ಪಿಸುವುದು ತಪ್ಪು ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಬಿಜೆಪಿಯ ಸಂಸದ ಹುಕುಂ ಸಿಂಗ್ ಕೈರಾಣ ಸಮಸ್ಯೆಗೆ ಸಂಬಂಧಿಸಿದಂತೆ ಕೋಮು ಭಾವನೆಗಳ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮಿ ಚಕ್ರಪಾಣಿ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರು ಬಹುಸಂಖ್ಯಾತರಾಗಿರುವ ಕೈರಾನದಲ್ಲಿ ಧಾರ್ಮಿಕ ವಿಷಯಗಳಿಂದ ಹಿಂದೂಗಳು ವಲಸೆ ಹೋಗುತ್ತಿಲ್ಲ, ಬದಲಾಗಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಂದ ವಲಸೆ ಹೋಗುತ್ತಿದ್ದಾರೆ ಎಂದು ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ. ಕೈರಾಣ ಸಾಮೂಹಿಕ ವಲಸೆ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಮುಖಂಡರು ಹಿಂದೂ ಸಂತರು ಕೈರಾನಗೆ ತೆರಳಿ ನೈಜ ಪರಿಸ್ಥಿತಿಯನ್ನು ತಿಳಿಸಬೇಕೆಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಹಿಂದೂ ಮಹಾಸಭಾದ ಮುಖಂಡರು ಕೈರಾನಾಗೆ ಭೇಟಿ ನೀಡಿ ಹಿಂದೂ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ.