ನವದೆಹಲಿ: ವಿತ್ತ ಸಲಹೆಗಾರ ಅರವಿಂದ್ ಸುಬ್ರಮಣಿಯನ್‌ರ ವಜಾಗೆ ಅಗ್ರಹಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಇದೀಗ ವಿತ್ತ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ರನ್ನು ಗುರಿಯಾಗಿಸಿಕೊಂಡಿದ್ದು, ಕೂಡಲೇ ಅವರ ವಜಾಗೆ ಅಗ್ರಹಿಸಿದ್ದಾರೆ.
ಯುಪಿಎ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರ ಸ್ವಕ್ಷೇತ್ರ ಮಹಾಬಲಿಪುರಂನ ಅತ್ಯಂತ ಬೆಳೆಬಾಳುವ ಜಾಗವನ್ನು ಸ್ವಾಹಾ ಮಾಡುವಲ್ಲಿ ಶಕ್ತಿಕಾಂತ್ ಸಲಹೆ ನೀಡಿದ್ದರು ಎಂದು ಆರೋಪಿಸಿರುವ ಸ್ವಾಮಿ, ಶಕ್ತಿಕಾಂತ್ ದಾಸ್ ವಿರುದ್ಧ ಆಸ್ತಿ ಕಬಳಿಕೆ ಮಾಡಿದ ಪ್ರಕರಣವೂ ದಾಖಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ಸೆಪ್ಟೆಂಬರ್ ನಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲ್ಲಿದ್ದು, ನೂತನ ಆರ್ ಬಿಐ ಗವರ್ನರ್ ಆಯ್ಕೆಗೆ ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಆರ್ ಬಿಐನ ನೂತನ ಗವರ್ನರ್ ಆಕಾಂಕ್ಷಿಗಳ ಪಟ್ಟಿಯಲ್ಲಿ ವಿತ್ತ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರ ಹೆಸರೂ ಕೂಡ ಪ್ರಬಲವಾಗಿ ಕೇಳಿಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಸ್ವಾಮಿ ಅವರ ಆರೋಪ ಶಕ್ತಿಕಾಂತ್ ದಾಸ್ ಅವರಿಗೆ ಭಾರಿ ಹಿನ್ನಡೆಯುಂಟುಮಾಡುವ ಅಪಾಯವಿದೆ ಎದು ಹೇಳಲಾಗುತ್ತಿದೆ.
ಕೇಜ್ರಿವಾಲ್ ಪದವಿ ಪ್ರವೇಶಾತಿ ವಿವರ ಕೇಳಿದ ಸ್ವಾಮಿ
ಇನ್ನು ಇದೇ ವೇಳೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪದವಿಯ ಕುರಿತು ಕೂಡ ಶಂಕೆ ವ್ಯಕ್ತಪಡಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರ ಬಿಟೆಕ್ ಪದವಿಯ ಪ್ರವೇಶಾತಿ ವಿವರ ಹಾಗೂ ರಾಷ್ಟ್ರಮಟ್ಟದಲ್ಲಿ ಪಡೆದ ರ‍್ಯಾಂಕಿಂಗ್ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿ ವಿವರ ಕೋರಿದ್ದಾರೆ. ಆದರೆ ಇದಕ್ಕೆ ಮಾಹಿತಿ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ ಎಂದು ಸ್ವಾಮಿ ಹೇಳಿದ್ದಾರೆ.