ನವದೆಹಲಿ: ಪ್ರತ್ಯೇಕ ರಾಜ್ಯ ವಿಭಜನೆ ಬೆನ್ನಲ್ಲೇ ದೆಹಲಿಯಲ್ಲಿರುವ ಆಂಧ್ರಭವನದ ಮಾಲೀಕತ್ವವನ್ನು ಕೂಡ ಸರ್ಕಾರಕ್ಕೆ ನೀಡಬೇಕು ಎಂದು ತೆಲಂಗಾಣ ಹೊಸ ತಕರಾರು ತೆಗೆದಿದೆ.
ಪ್ರತ್ಯೇಕ ರಾಜ್ಯ ವಿಭಜನೆಯಾಗಿ 2 ವರ್ಷಗಳೇ ಕಳೆದರೂ ಈ ಎರಡೂ ರಾಜ್ಯಗಳು ಒಂದಲ್ಲ ಒಂದು ವಿಚಾರಕ್ಕೆ ಜಗಳವಾಡುತ್ತಲೇ ಇವೆ. ಈ ಹಿಂದೆ ನೀರು ಮತ್ತು ವಿದ್ಯುತ್ ಗಾಗಿ ಕಚ್ಚಾಡಿದ್ದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಇದೀಗ ದೆಹಲಿಯಲ್ಲಿರುವ ಆಂಧ್ರ ಭವನ ಮತ್ತು ಅದರ ಅಧೀನದಲ್ಲಿರುವ ಬಹುಕೋಟಿ ಮೌಲ್ಯದ ಭೂಮಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಆಗ್ರಹಿಸುತ್ತಿವೆ.
ದೆಹಲಿಯ ಪ್ರತಿಷ್ಠಿತ ಜಸ್ವಂತ್ ಸಿಂಗ್ ರಸ್ತೆ ಮತ್ತು ಅಶೋಕ ರಸ್ತೆಯಲ್ಲಿರುವ ಆಂಧ್ರ ಪ್ರದೇಶ ಸರ್ಕಾರದ ಒಡೆತನದಲ್ಲಿರುವ 19 ಎಕರೆ ಆಸ್ತಿ ತನಗೇ ಸೇರಬೇಕು ಎಂದು ತೆಲಂಗಾಣ ತಕರಾರು ತೆಗೆದಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಈ ಸಂಬಂಧ ಸಿಎಂ ಕೆ.ಚಂದ್ರಶೇಖರ ರಾವ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಪತ್ರವೊಂದನ್ನು ಬರೆದಿದ್ದು, ಆಂಧ್ರ ಭವನದ ಸಂಪೂರ್ಣ ಹಕ್ಕುದಾರ ತಾನೆಂದು (ತೆಲಂಗಾಣ) ವಿವರಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಸರ್ಕಾರ, ಜನಸಂಖ್ಯೆ ಆಧಾರದ ಮೇಲೆ ಆಸ್ತಿ ವಿಭಜಿಸಬೇಕೇ ಹೊರತು ಸಂಪೂರ್ಣ ಆಸ್ತಿ ತೆಲಂಗಾಣಕ್ಕೆ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ. ಹೀಗಾಗಿ ಉಭಯ ರಾಜ್ಯಗಳ ಈ ಹೊಸ ಕದನ ಮುಂದಿನ ದಿನಗಳಲ್ಲಿ ಅದಾವ ರೀತಿಯ ತಿರುವು ಪಡೆಯಲಿದೆ ಕಾದು ನೋಡಬೇಕಿದೆ.
ತೆಲಂಗಾಣ ರಾಜ್ಯ ರಚನೆ ಮುನ್ನ ಜಸ್ವಂತ್ ಸಿಂಗ್ ರಸ್ತೆಯಲ್ಲಿರುವ ಆಂಧ್ರಭವನ ಆಂಧ್ರ ಸರ್ಕಾರದ ಸುಪರ್ದಿಯಲ್ಲಿತ್ತು. ಆದರೆ ತೆಲಂಗಾಣ ಹುಟ್ಟಿಕೊಂಡ ಬಳಿಕ ತೆಲಂಗಾಣ ಸರ್ಕಾರ ಕೂಡ ಈ ಭವನದಲ್ಲಿ ಕಚೇರಿ ನಿರ್ಮಾಣ ಮಾಡಿದ್ದು, ಸರ್ಕಾರಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.