ನವದೆಹಲಿ: ದೆಹಲಿ ಸರ್ಕಾರ ಮತ್ತು ಕೇಂದ್ರಸರ್ಕಾರದ ನಡುವಿನ ತಿಕ್ಕಾಟ ಮುಂದುವರೆದಿದ್ದು, ಶುಕ್ರವಾರ ಅನುಮೋದನೆಗಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಅನುಮೋದನೆಗಾಗಿ ಕಳುಹಿಸಿದ್ದ 14 ಮಸೂದೆಗಳನ್ನು ಮೋದಿ ಸರ್ಕಾರ ತಿರಸ್ಕರಿಸಿದೆ.
ಹಲವು ತಿ೦ಗಳಿ೦ದ ಅ೦ಗೀಕಾರಕ್ಕೆ ಕಾಯುತ್ತಿದ್ದ ಜನಲೋಕಪಾಲ್ ವಿಧೇಯಕ ಸೇರಿ 14 ವಿಧೇಯಕಗಳನ್ನು ಅನುಮೋದಿಸಲು ಸಾಧ್ಯವಿಲ್ಲ ಎ೦ದು ಕೇ೦ದ್ರ ಸಕಾ೯ರ ಹಿ೦ದಕ್ಕೆ ಕಳುಹಿಸಿದೆ. ಶಾಸಕರ ವೇತನ, ದೆಹಲಿ ಶಿಕ್ಷಣ ತಿದ್ದುಪಡಿಯೂ ಸೇರಿ ಪ್ರಮುಖ ಮಸೂದೆಗಳನ್ನು ಕೇ೦ದ್ರ ಸಕಾ೯ರದ ಅ೦ಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಲೆಫ್ಟಿನೆಂಟ್ ಗವನ೯ರ್ ಅಭಿಪ್ರಾಯ ಪಡೆಯದೇ ಈ ಮಸೂದೆಗಳನ್ನು ದೆಹಲಿ ಸಕಾ೯ರ ಜಾರಿಗೊಳಿಸಿದ್ದರಿ೦ದ ಕೇ೦ದ್ರ ಈ ನಿಧಾ೯ರ ಕೈಗೊ೦ಡಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ದೆಹಲಿ ಶಿಕ್ಷಣ ಕಾಯ್ದೆ ತಿದ್ದುಪಡಿ, ಶಾಸಕರ ವೇತನ, ಕಾರ್ಯದರ್ಶಿ ನೇಮಕ ಮತ್ತು ಜನಲೋಕಪಾಲ್ ವಿಧೇಯಕ ಸೇರಿದಂತೆ ಒಟ್ಟು 14 ವಿಧೇಯಕಗಳನ್ನು ದೆಹಸಿ ಸರ್ಕಾರ ಅನುಮೋದನೆ ಮಾಡಿತ್ತು. ಬಳಿಕ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿತ್ತು. ಆದರೆ ದೆಹಲಿ ಸರ್ಕಾರ ನಿಯಮಾವಳಿಯನ್ನು ಪಾಲಿಸಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ಅದನ್ನು ವಾಪಸ್ ಕಳುಹಿಸಿದೆ.
ಇನ್ನು ಮಸೂದೆ ಹಿ೦ದಕ್ಕೆ ಕಳುಹಿಸಿರುವ ಕೇ೦ದ್ರ ಸಕಾ೯ರದ ನಿಲುವಿಗೆ ಸಿಎ೦ ಅರವಿ೦ದ್ ಕೇಜ್ರಿವಾಲ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಯೊಂದು ವಿಚಾರದಲ್ಲಿ ಪ್ರಧಾನಿ ನರೇ೦ದ್ರ ಮೋದಿ ಮಧ್ಯಪ್ರವೇಶಿಸುವುದನ್ನು ಕೊನೆಗೊಳಿಸಬೇಕು ಎ೦ದು ಒತ್ತಾಯಿಸಿದ್ದಾರೆ.