ದೇಶ

ಎನ್ಐಎ ಅಧಿಕಾರಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮುನೀರ್ ಬಂಧನ

Manjula VN

ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣದ ತನಿಖಾ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಎನ್ ಐಎ ಅಧಿಕಾರಿ ಮೊಹಮ್ಮದ್ ತಾಂಝೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮುನೀರ್ ಎಂಬ ವ್ಯಕ್ತಿಯನ್ನು ವಿಶೇಷ ತನಿಖಾ ತಂಡ ಮಂಗಳವಾರ ಬಂಧನಕ್ಕೊಳಪಡಿಸಿದೆ.

ಮುನೀರ್ ಬಂಧಿತ ಆರೋಪಿ. ಈತನನ್ನು ನೊಯ್ಡಾದಲ್ಲಿ ವಿಶೇಷ ತನಿಖಾ ತಂಡ ಬಂಧನಕ್ಕೊಳಪಡಿಸಿದ್ದು, ಅಜ್ಞಾತ ಸ್ಥಳಕ್ಕೆ ರವಾನಿಸಿರುವುದಾಗಿ ತಿಳಿದುಬಂದಿದೆ.

ಪಠಾಣ್ ಕೋಟ್ ವಾಯುನೆಲೆ ಉಗ್ರರ ದಾಳಿ ಪ್ರಕರಣದ ತನಿಖಾ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಎನ್ ಐಎ ಅಧಿಕಾರಿ ಮೊಹಮ್ಮದ್ ತಾಂಝೀಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮದುವೆ ಸಮಾರಂಭಕ್ಕೆ ಹೋಗಿ ಹಿಂತಿರುಗು ಬರುತ್ತಿದ್ದರು.

ಈ ವೇಳೆ ಬಿಜ್ನೋರ್ ಜಿಲ್ಲೆಯಲ್ಲಿರುವ ಸಾಹಸ್ಪುರ ಗ್ರಾಮದ ಬಳಿ ಬರುತ್ತಿದ್ದಂತೆ ಮುಸುಧಾರಿಗಳಾಗಿ ಬಂಧೂಕು ಹಿಡಿದು ಬಂದಿರುವ ದುಷ್ಕರ್ಮಿಗಳು ಏಕಾಏಕಿ ಅಧಿಕಾರಿಯ ಮೇಲೆ ಗುಂಡಿನ ಮಳೆಸುರಿಸಿದ್ದರು. ಘಟನೆ ವೇಳೆ 24 ಗುಂಡುಗಳು ಅಧಿಕಾರಿಯ ದೇಹದೊಳಗೆ ಹೊಕ್ಕಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಧಿಕಾರಿ ಹತ್ಯೆ ಪ್ರಕರಣವನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ತಂಡವೊಂದು ತನಿಖೆ ನಡೆಸುತ್ತಿದ್ದು, ಇದರಂತೆ ಮುನೀರ್ ಎಂಬ ಆರೋಪಿ ಪ್ರಕರಣದ ಪ್ರಮುಖ ರುವಾರಿ ಎಂದು ಹೇಳಲಾಗುತ್ತಿತ್ತು. ಈತನ ಬಂಧನಕ್ಕೆ ತನಿಖಾ ತಂಡ ಸಾಕಷ್ಟು ಯತ್ನ ನಡೆಸಿತ್ತು. ಆದರೆ, ಸಾಧ್ಯವಾಗಿರಲಿಲ್ಲ.

ಹೀಗಾಗಿ ಮುನೀರ್ ನನ್ನು ಹುಡುಕಿಕೊಟ್ಟವರಿಗೆ ರು.2 ಲಕ್ಷ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಣೆ ಮಾಡಿದ್ದರು. ನಂತರ ತಲೆಮರೆಸಿಕೊಂಡಿದ್ದ ಮುನೀರ್ ಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದ ಪೊಲೀಸರು ಇದೀಗ ಮುನೀರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

SCROLL FOR NEXT