ನವದೆಹಲಿ: ರಮ್ಜಾನ್ ಪ್ರಯುಕ್ತ ಆಯೋಜಿಸಲಾಗಿರುವ ಇಫ್ತಾರ್ ಕೂಟಕ್ಕೆ ಪಾಕಿಸ್ತಾನಕ್ಕೆ ನೀಡಲಾಗಿದ್ದ ಆಹ್ವಾನವನ್ನು ರಾಷ್ಟ್ರೀಯ ಮುಸ್ಲಿಂ ಮಂಚ್ ಮಂಗಳವಾರ ಹಿಂಪಡೆದಿದೆ.
ರಮ್ಜಾನ್ ಹಬ್ಬದ ಪ್ರಯುಕ್ತ ಜುಲೈ 2 ರಂದು ಸಂಸದೀಯ ಭವನದಲ್ಲಿ ಆರ್ ಎಸ್ಎಸ್ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಇದಕ್ಕೆ ಪಾಕಿಸ್ತಾನ ಸೇರಿ 140 ರಾಷ್ಟ್ರಗಳ ರಾಯಭಾರಿಗಳನ್ನು ಆಹ್ವಾನಿಸಿತ್ತು. ಇದರಂತೆ ಪಾಕ್ ಹೈ ಕಮಿಷನರ್ ಅಬ್ದುಲ್ ಬಸಿತ್ ಅವರಿಗೂ ಆಹ್ವಾನ ನೀಡಿತ್ತು.
ಆದರೆ, ಪಾಂಪೋರದಲ್ಲಿ ನಡೆದ ದಾಳಿ ಹಿನ್ನೆಲೆಯಲ್ಲಿ ಅಬ್ದುಲ್ ಬಸಿತ್ ನೀಡಿದ್ದ ಹೇಳಿಕೆ ವಿರುದ್ಧ ಕಿಡಿಕಾರಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಇದೀಗ ಇಫ್ತಾರ್ ಕೂಟ ಸಂಬಂಧ ಅಬ್ದುಲ್ ಬಸಿತ್ ಗೆ ನೀಡಿದ್ದ ಆಹ್ವಾನವನ್ನು ಹಿಂಪಡೆದಿದೆ ಎನ್ನಲಾಗಿದೆ.
ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಾಂಪೋರ ಬಳಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ಗುಂಪೊಂದು ದಾಳಿ ಮಾಡಿತ್ತು. ದಾಳಿಯಲ್ಲಿ 8 ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ್ದರು. ದಾಳಿ ಹಿಂದೆ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಇದೆ ಎಂದು ಹೇಳಲಾಗುತ್ತಿತ್ತು.
ದಾಳಿ ಸಂಬಂಧ ಹೇಳಿಕೆ ನೀಡಿದ್ದ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಸಿತ್ ಅವರು, ಇದು ರಮ್ಜಾನ್ ತಿಂಗಳು. ಪ್ರಸ್ತುತ ಇಫ್ತಾರ್ ಪಾರ್ಟಿ ಬಗ್ಗೆ ಗಮನ ಹರಿಸೋಣ. ಜಮ್ಮು ಮತ್ತು ಕಾಶ್ಮೀರ ವಿಚಾರ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಈ ವಿಚಾರ ಬಗೆಹರಿಯುವ ಅಗತ್ಯವಿದೆ. ಕುಳಿತು ಚರ್ಚಿಸಿದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇಫ್ತಾರ್ ಪಾರ್ಟಿ ಆಯೋಜಿಸಿ ಸಂತಸದಲ್ಲಿರೋಣ. ಮಾಧ್ಯಮಗಳು ಇಫ್ತಾರ್ ಪಾರ್ಟಿ ಬಗ್ಗೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದು ಎಂದು ಹೇಳಿದ್ದರು.
ಆರ್ ಎಸ್ಎಸ್ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿರುವ ಇಫ್ತಾರ್ ಕೂಟದ ವಿರುದ್ಧ ಕಿಡಿಕಾರಿದ್ದ ಶಿವಸೇನೆಯು, ಆರ್ ಎಸ್ ಎಸ್ ತನ್ನ ಇತಿಹಾಸ ಮತ್ತು ಪ್ರಮುಖ ಧ್ಯೇಯಗಳನ್ನು ಮರೆತು ಇದೀಗ ಇಫ್ತಾರ್ ಕೂಟ ಏರ್ಪಡಿಸಲು ಮುಂದಾಗಿರುವುದು ದುರಂತದ ಸಂಗತಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಹಿಂದೂ ರಾಷ್ಟ್ರದ ತತ್ವ ಸಿದ್ಧಾಂತಗಳ ಮೇಲೆ ಸ್ಥಾಪಿತವಾಗಿರುವ ಆರ್ ಎಸ್ ಎಸ್ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಲು ಮುಂದಾಗಿರುವುದು ನಿಜಕ್ಕೂ ಆಶ್ಟರ್ಯವನ್ನುಂಟು ಮಾಡಿದೆ ಎಂದು ಹೇಳಿತ್ತು.