ಚೆನ್ನೈ: ಹಾಡುಹಗಲೇ ಚೆನ್ನೈ ರೇಲ್ವೆ ಪ್ಲಾಟ್ ಫಾರ್ಮ್ ನಲ್ಲಿ ನಡೆದ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಈ ಸಂಬಂಧ ತಮಿಳುನಾಡು ಸರ್ಕಾರಕ್ಕೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ದಕ್ಷಿಣ ರೇಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಮಹಿಳಾ ಆಯೋಗ ಸೂಚಿಸಿದೆ. ಅಲ್ಲದೆ ಫ್ಯಾಕ್ಸ್ ಮೂಲಕ ತಕ್ಷಣವೇ ವರದಿ ನೀಡುವಂತೆ ಆದೇಶಿಸಿದೆ.
ರೇಲ್ವೆ ಇಲಾಖೆ ಹಾಗೂ ತಮಿಳುನಾಡು ಸರ್ಕಾರ ನೀಡುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಮಹಿಳಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಳಾ ಆಯೋಗದ ನೋಟಿಸ್ ನೀಡಿದ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ಕರೆದಿರುವ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಸ್ವಾತಿ ಕೊಲೆ ಪ್ರಕರಣದ ಬಗ್ಗೆ ಚರ್ಚಿಸುತ್ತಿದ್ದಾರೆ. ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ ಹಾಗೂ ನಗರ ಪೊಲೀಸ್ ಆಯುಕ್ತ ಟಿಕೆ ರಾಜೇಂದ್ರನ್ ಅವರು ಭಾಗವಹಿಸಿದ್ದರು.