ವಿಶಾಖಪಟ್ಟಣಂ: ನೈಜಿರಿಯಾದಲ್ಲಿ ಬೋಕೋ ಹರಾಮ್ ಸಂಘಟನೆ ಉಗ್ರರು ಇಬ್ಬರು ಭಾರತೀಯರನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶಾಖಪಟ್ಟಣಂ ಮೂಲದ ಮಂಗಿಪುಡಿ ಸಾಯಿ ಶ್ರೀನಿವಾಸ್ ಮತ್ತು ಅನೀಶಾ ಶರ್ಮಾರನ್ನು ಉಗ್ರರು ಅಪಹರಣ ಮಾಡಿದ್ದಾರೆ ಎಂದು ಶ್ರೀನಿವಾಸ್ ಮಡದಿ ಲತಾ ಶ್ರೀನಿವಾಸ್ ಹೇಳಿದ್ದು, ಅವರ ಬಿಡುಗಡೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಎನ್ ಯುವರಾಜ್ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಸಂಜೆ 7.30ರ ಸುಮಾರಿಗೆ ಉತ್ತರ ಮಧ್ಯ ನೈಜಿರಿಯಾದ ಬೆನ್ಯೂ ಪ್ರಾಂತ್ಯದ ಬಿಬೊಕೋದ ಡ್ಯಾಂಗೋಟ್ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ಹಿಂದಿರುಗುವ ವೇಳೆ ಬಂಧೂಕುಧಾರಿಗಳ ಗುಂಪು ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದಾರೆನ್ನುವ ಮಾಹಿತಿ ಇದೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ.
ಬುಧವಾರ ಪತಿಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ಪಟ್ಟಿದೆ ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಮಾರನೇ ದಿನ ಕಾರ್ಖಾನೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಅಪಹರಣ ಆಗಿರುವ ಮಾಹಿತಿ ಲಭಿಸಿದೆ ಎಂದು ಲತಾ ಶ್ರೀನಿವಾಸ್ ಹೇಳಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಯುವರಾಜ್ ಅವರು ನೈಜಿರಿಯಾ ಪೊಲೀಸ್ ಅಧಿಕಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದಾರೆ. ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನೂ ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.