ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಊಹಾಪೋಹಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳ ಜಾರಿ ವಿಷಯದಲ್ಲಿ ತಮ್ಮ ಮಂತ್ರಿ ಮಂಡಲದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ.
ಮಂತ್ರಿ ಮಂಡಲದೊಂದಿಗೆ ಸುಮಾರು 4 ಗಂಟೆಗೂ ಅಧಿಕ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಎರಡು ವರ್ಷಗಳಲ್ಲಿ ಯೋಜನೆಗಳ ಜಾರಿ ವಿಷಯದಲ್ಲಿ ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದು, ಜನರಿಗೆ ಸರಿಯಾಗಿ ತಲುಪಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಯೋಜನೆಗಳ ಜಾರಿಯೊಂದಿಗೆ ಬಜೆಟ್ ನ ಅನುದಾನಗಳು ಸೂಕ್ತ ರೀತಿಯಲ್ಲಿ ಖರ್ಚಾಗಿದೆಯೇ ಎಂಬುದರ ಬಗ್ಗೆ ಹಾಗೂ ಪ್ರತಿ ಸಚಿವಾಲಯ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿ ದೇಶದ ಸಾಮಾನ್ಯ ವ್ಯಕ್ತಿಗೂ ಪ್ರಯೋಜನವಾಗುವಂತೆ ಕೇಂದ್ರ ಸರ್ಕಾರದ ಪ್ರತಿ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ಸಚಿವರಿಗೆ ಸಭೆಯಲ್ಲಿ ತಿಳಿಸಿದ್ದಾರೆ. ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಜಾರಿಯಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಪವರ್ಪಾಯಿಂಟ್ ಪ್ರಸ್ತುತಿಯನ್ನು ಪ್ರದರ್ಶಿಸಿದ್ದಾರೆ. ಯೋಜನೆಗಳು ನಿರೀಕ್ಷಿತ ರೀತಿಯಲ್ಲಿ ಜಾರಿಯಾಗಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಹೊಸ ಯೋಜನೆಗಳ ಜಾರಿ ಬದಲು ಇರುವ ಯೋಜನೆಗಳಲ್ಲೇ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದೆಂದು ಅಭಿಪ್ರಾಯಪಟ್ಟಿದ್ದು, ಯೋಜನೆಗಳ ಜಾರಿ ಕುರಿತು ಸಮಗ್ರ ಮಾಹಿತಿ ನೀಡಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರ ಕಾರ್ಯವೈಖರಿಗೆ ಮೋದಿ ಹಾಗೂ ಸಚಿವ ಸಂಪುಟ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.