ನವದೆಹಲಿ: ಭಾರತ ಜಗತ್ತಿನ ಅತ್ಯಂತ ಪ್ರಮುಖ ಜಾತ್ಯಾತೀತ ರಾಷ್ಟ್ರ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು, ಕೇವಲ ಒಂದು ಪಕ್ಷದಿಂದ ಮಾತ್ರ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸಾಂಘಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಇಸ್ಲಾಂ ಧರ್ಮದ ಎಲ್ಲಾ ಪಂಥಗಳನ್ನು ಹೊಂದಿರುವ ದೇಶ ನಮ್ಮದು. ಭಯೋತ್ಪಾದನೆಗೆ ಯಾವುದೇ ಬಣ್ಣ, ಜಾತಿ, ಧರ್ಮ ಮತ್ತು ಪಂಥ ಇಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಕೋಮು ಸಾಮರಸ್ಯದಂತಹ ವಿಷಯಗಳನ್ನು ರಾಜಕೀಯ ಲಾಭ ಅಥವಾ ನಷ್ಟದ ಮೇಲೆ ಅಳೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ತಿಳಿಸಿದರು.