ಶಿಮ್ಲಾ: ೫೦೦೦೦ ರೂ ವರೆಗೆ ಸಣ್ಣ ರೈತರ ಸಾಲವನ್ನು ಮನ್ನಾ ಮಾಡಿ ಅಥವಾ ಅವರಿಗೆ ಕಂತುಗಳಲ್ಲಿ ಸಾಲ ತೀರಿಸಲು ಅವಕಾಶ ನೀಡಿ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಸರ್ಕಾರಕ್ಕೆ ಹೇಳಿದೆ.
ಅಲ್ಲದೆ ರೈತರು ಅತಿ ಹೆಚ್ಚು ಒತ್ತಡದಲ್ಲಿರುವುದರಿಂದ ರೈತರ ಆಯೋಗವೊಂದನ್ನು ರಚಿಸಿ ಹಾಗೂ ಉಳುವವರಿಗೆ ವಿಮಾ ಯೋಜನೆ ಮಾಡಿಕೊಡಿ ಎಂದು ಕೂಡ ತಿಳಿಸಿದೆ.
ಭಾರತೀಯ ಗೋವಂಶ್ ರಕ್ಷಣ ಸಂವರ್ಧನ್ ಪರಿಷದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿದ, ನ್ಯಾಯಾಧೀಶ ರಾಜೀವ್ ಶರ್ಮಾ ಮತ್ತು ನ್ಯಾಯಮೂರ್ತಿ ಸುರೇಶ್ವರ್ ಠಾಕೂರ್ ಒಳಗೊಂಡ ವಿಭಾಗೀಯ ಪೀಠ ಇಲ್ಲಿನ ವಿಭಿನ್ನ ಭೌಗೋಳಿಕ ಲಕ್ಷಣಗಳಿಂದ ರೈತರು ಮಳೆಯನ್ನೇ ನಂಬಿರುವ ಪರಿಸ್ಥಿತಿ ಇದೆ ಎಂದು ಹೇಳಿ ಮೇಲಿನ ಆದೇಶಗಳನ್ನು ಹೊರಡಿಸಿದೆ.
"ಅವರ ಕುಂದು ಕೊರತೆಗಳನ್ನು ಆಲಿಸಲು ಯಾವುದೇ ಸಾಮಾನ್ಯ ಸಮಿತಿಯಿಲ್ಲ ಮತ್ತು ಅವರ ಹಿಸಾಸಕ್ತಿಗಳ ರಕ್ಷಣೆಗೆ ಸರ್ಕಾರ ಮಧ್ಯ ಪ್ರವೇಶಿಸುವುದು ಸಾರ್ವಜನಿಕವಾಗಿ ಅತಿ ಮುಖ್ಯವಾದದ್ದು" ಎಂದು ವಿಭಾಗೀಯ ಪೀಠ ಬುಧವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.
ಕನಿಷ್ಟ ೫೦೦೦೦ ರೂ ವರೆಗೆ ಸಣ್ಣ ರೈತರ ಸಾಲವನ್ನು ಮನ್ನಾ ಮಾಡಿ ಅಥವಾ ಅವರಿಗೆ ಕಂತುಗಳಲ್ಲಿ ಸಾಲ ತೀರಿಸಲು ಅವಕಾಶ ನೀಡಿ ಎಂದಿರುವ ಕೋರ್ಟ್ ವಿಚಾರಣೆಯನ್ನು ಜೂನ್ ೧೩ಕ್ಕೆ ಮುಂದೂಡಿದೆ.