ನವದೆಹಲಿ: 2004ರಲ್ಲಿ ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಶ್ರಾತ್ ಜಹಾನ್'ಳದ್ದು ಪೂರ್ವ ನಿಯೋಜಿತ ಹತ್ಯೆಯಾಗಿತ್ತು ಎಂದು ಸಿಬಿಐ ತನಿಖೆಯಲ್ಲಿ ಪಾಲ್ಗೊಂಡಿದ್ದ ಐಪಿಎಸ್ ಅಧಿಕಾರಿ ಸತೀಶ್ ವರ್ಮಾ ಅವರು ಆರೋಪ ವ್ಯಕ್ತಪಡಿಸಿದ್ದಾರೆ.
ಇಶ್ರಾತ್ ಜಹಾನ್ ಪ್ರಕರಣ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ವರ್ಮಾ ಅವರು ಪ್ರಕರಣ ಕುರಿತಂತೆ ಮಾತನಾಡಿದ್ದು, ಎನ್ ಕೌಂಟರ್ ನಡೆಸುವ ಮೊದಲೇ ಗುಪ್ತಚರ ಬ್ಯೂರೋ ಅಧಿಕಾರಿಗಳು ಇಶ್ರಾತ್ ಮತ್ತು ಇತರೆ ಮೂವರನ್ನು ಬಂಧಿಸಿದ್ದರು. ಆರೋಪಿ ಉಗ್ರರೊಂದಿಗೆ ಹೆಣ್ಣುಮಗಳೊಬ್ಬಳಿದ್ದಾಳೆ ಎಂಬ ಯಾವುದೇ ಮಾಹಿತಿಯೂ ಗುಪ್ತಚರ ಸಂಸ್ಥೆಗಳಿಂದ ಬಂದಿರಲಿಲ್ಲ. ಆದರೂ ಕೂಡ ಇಶ್ರಾತ್ ಸೇರಿದಂತೆ ನಾಲ್ವರನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡ ಅಧಿಕಾರಿಗಳು, ನಂತರ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು ಎಂದು ಖಾಸಗಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇಶ್ರಾತ್ ನಿಜಕ್ಕೂ ಅಮಾಯಕ ಹುಡುಗಿಯಾಗಿದ್ದಳು. ಒಬ್ಬ ಅಮಾಯಕ ಹುಡುಗಿಯ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ರಾಷ್ಟ್ರೀಯವಾದ ಮತ್ತು ಭದ್ರತೆಯ ಬೋಗಿಯನ್ನು ಓಡಿಸಲಾಗುತ್ತಿದೆ. ಈ ಮೂಲಕ ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ. ಇಶ್ರಾತ್ ತನ್ನ ಮನೆಯಿಂದ ಹೊರಗಿದ್ದದ್ದೇ 10 ದಿನ. ಒಬ್ಬ ವ್ಯಕ್ತಿಯನ್ನು ಆತ್ಮಾಹುತಿ ಬಾಂಬರ್ ಆಗಿ ಸಿದ್ಧಪಡಿಸಲು 10 ದಿನದಲ್ಲಿ ಸಾಧ್ಯವೇ ಇಲ್ಲ.
ಕೇವಲ 303 ರೈಫಲ್ ಅನ್ನು ಸರಿಯಾಗಿ ಬಳಸುವುದನ್ನು ಕಲಿಸಲು ಕನಿಷ್ಠ ಪಕ್ಷ 15 ದಿನಗಳಾದರೂ ಬೇಕು. ಅಂತಹದಲ್ಲಿ ಇಶ್ರಾತ್ ಜಹಾನ್ ಆತ್ಮಾಹುತಿ ಬಾಂಬರ್ ಆಗಿರಲು ಹೇಗೆ ಸಾಧ್ಯ. ಎಂದು ಹೇಳಿದ್ದಾರೆ. ಅಲ್ಲದೆ, ಅಧಿಕಾರಿ ಮಣಿ ಅವರನ್ನು ಸಿಗರೇಟ್ನಿಂದ ಸುಟ್ಟಿರುವ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಸತೀಶ್ ವರ್ಮಾ ಅವರು ಗುಜರಾತ್ ಹೈ ಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದರು. ಐಜಿ ರ್ಯಾಂಕ್ ಅಧಿಕಾರಿಯಾದ ವರ್ಮಾ ಈಗ ಶಿಲ್ಲಾಂಗ್ ನಲ್ಲಿ ನೀಪ್ಕೋದಲ್ಲಿ ಮುಖ್ಯ ಜಾಗೃತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಬಣ್ಣವನ್ನು ಪಡೆದುಕೊಳ್ಳುತ್ತಿದ್ದು, ಪ್ರಕರಣದ 2ನೇ ಅಫಿಡವಿಟ್ ನಲ್ಲಿ ಇಶ್ರತ್ ಲಷ್ಕರ್ ನಂಟಿನ ಮಾಹಿತಿಯನ್ನು ಯುಪಿಎ ಸರ್ಕಾರ ಬದಲಾಯಿಸಿತ್ತು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರು ಈ ಹಿಂದೆ ಆರೋಪಿಸಿದ್ದರು. ಇದರ ನಂತರ ಮತ್ತೊಬ್ಬ ಅಧಿಕಾರಿ ಅಫಿಡವಿಟ್ ಗೆ ಸಹಿ ಹಾಕುವಂತೆ ತನಗೆ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಇದೀಗ ಮತ್ತೊಬ್ಬ ಅಧಿಕಾರಿ ಪ್ರಕರಣ ಸಂಬಂಧ ಮಾತನಾಡಿ ಇಶ್ರತ್ ಅಮಾಯಕಳಾಗಿದ್ದು, ಆಕೆಯ ಹತ್ಯೆ ಪೂರ್ವನಿಯೋಜಿತವಾಗಿತ್ತು ಎಂದು ಹೇಳಿದ್ದಾರೆ.