ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿಗಳು ದೇಶದ್ರೋಹಿಗಳಲ್ಲ. ಆದರೆ ದೇಶದ್ರೋಹದ ಕಾನೂನು ದುರ್ಬಳಕೆಯಾಗುತ್ತಿದೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್ ಅವರು, ದೇಶದ್ರೋಹದ ಆರೋಪದ ಮೇಲೆ ತಮ್ಮನ್ನು ದೆಹಲಿ ಪೊಲೀಸರು ಬಂಧಿಸಿದ ವೇಳೆ ತಮಗೆ ಬೆಂಬಲ ನೀಡಿದ ಎಲ್ಲರನ್ನು ಅಭಿನಂದಿಸಿದರು.
ಜೆಎನ್ ಯು ವಿದ್ಯಾರ್ಥಿಗಳು ದೇಶ ಪ್ರೇಮಿಗಳು. ಯಾರೂ ದೇಶದ್ರೋಹಿಗಳಲ್ಲಿ. ಆದರೆ ವಿವಿಯ ವಿರುದ್ಧ ಕೆಲವರು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಜೆಎನ್ ಯು ನಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ದೇಶ ಕಾಯುವ ಯೋಧರಾಗಿದ್ದಾರೆ. ಶಿಕ್ಷಣ ತಜ್ಞರಾಗಿದ್ದಾರೆ. ರಾಜಕಾರಣಿಗಳಾಗಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ನಿಮ್ಮ ತೆರಿಗೆಯ ಹಣ ಸರಿಯಾದ ರೀತಿಯಲ್ಲಿ ಖರ್ಚಾಗುತ್ತಿದೆ ಎಂದರು.
ಸಂಸತ್ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರುಗೆ ಕಾನೂನು ರೀತಿ ಗಲ್ಲು ಶಿಕ್ಷೆಯಾಗಿದೆ. ನನಗೆ ಅಫ್ಜಲ್ ಗುರು ಆದರ್ಶ ಅಲ್ಲ. ರೋಹಿತ್ ವೇಮುಲ ಆದರ್ಶ ವ್ಯಕ್ತಿ ಎಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಳಿದರು,
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿಷಯವನ್ನು ಪ್ರಸ್ತಾಪಿಸಿದ ಕನ್ಹಯ್ಯ ಕುಮಾರ್, ಪ್ರಧಾನಿಯೊಂದಿಗೆ ಅಭಿಪ್ರಾಯ ಭಿನ್ನಾಭಿಪ್ರಾಯ ಇದೆ ನಿಜ. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.