ಭಿತ್ತಿ ಪತ್ರ - ಕನ್ಹಯ್ಯ ಕುಮಾರ್
ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಜಹಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ನಾಲಿಕೆ ಕಟ್ ಮಾಡಿದರೆ 5 ಲಕ್ಷ ರುಪಾಯಿ ಹಾಗೂ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರೆ 11 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಉತ್ತರ ಪ್ರದೇಶದ ಬದೌನ್ನಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರು ಕನ್ಹಯ್ಯಾ ಕುಮಾರ್ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರುಪಾಯಿ ಬಹುಮಾನ ಘೋಷಿಸಿ ವಿವಾದ ಎಬ್ಬಿಸಿದ ಬೆನ್ನಲ್ಲೇ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ಹತ್ಯೆ ಮಾಡಿದರೆ 11 ಲಕ್ಷ ರುಪಾಯಿ ಬಹುಮಾನ ಘೋಷಿಸಿದ ಭಿತ್ತಿ ಚಿತ್ರಗಳು ರಾಜಧಾನಿ ದೆಹಲಿಯಲ್ಲಿ ಕಾಣಿಸಿಕೊಂಡಿವೆ.
ಉತ್ತರ ಪ್ರದೇಶ ಮತ್ತು ಬಿಹಾರದ ಜನರಿಗಾಗಿ ದುಡಿಯುವ ಸಂಘಟನೆ ಎಂಬುದಾಗಿ ಪ್ರತಿಪಾದಿಸಿರುವ ಪೂರ್ವಾಂಚಲ ಸೇನಾ ಮತ್ತು ಅದರ ಅಧ್ಯಕ್ಷ ಆದರ್ಶ ಶರ್ಮಾ ಹೆಸರಿನಲ್ಲಿ ಈ ಭಿತ್ತಿ ಚಿತ್ರಗಳನ್ನು ಪ್ರಕಟಿಸಲಾಗಿದ್ದು, ದೆಹಲಿಯ ಹಲವಡೆಗಳಲ್ಲಿ ಕಂಡು ಬಂದಿವೆ.
ಕನ್ಹಯ್ಯಾ ಕುಮಾರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಯಾರೇ ಆದರೂ ಅವರಿಗೂ ಪೂರ್ವಾಂಚಲ ಸೇನಾದಿಂದ 11 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂದು ಹಿಂದಿಯಲ್ಲಿ ಬರೆದಿರುವ ಒಕ್ಕಣಿಕೆ ಈ ಭಿತ್ತಿ ಚಿತ್ರಗಳಲ್ಲಿ ಇವೆ ಎಂದು ವರದಿಗಳು ಹೇಳಿವೆ.
‘ನಮಗೆ ನ್ಯಾಯಾಂಗದಲ್ಲಿ ವಿಶ್ವಾಸ ಇದೆ. ಆದರೆ ‘ತ್ವರಿತ’ ನ್ಯಾಯ ಲಭಿಸಬೇಕು ಎಂದು ಶರ್ಮಾ ಶನಿವಾರ ಹೇಳಿದ್ದಾರೆ. ‘ದೇಶದ್ರೋಹಿ ಸಾಯಬೇಕು. ಆತ ತಾಯಿ ಭಾರತಾಂಬೆಯನ್ನು ಅವಮಾನಿಸಿದ್ದಾನೆ ಮತ್ತು ರಾಷ್ಟ್ರವಿರೋಧಿ ಘೋಷಣೆ ಗಳನ್ನು ಕೂಗಿದ್ದಾನೆ. ನಮಗೆ ನ್ಯಾಯಾಲಯಗಳಲ್ಲಿ ವಿಶ್ವಾಸವಿದೆ. ಆದರೆ ತೀರ್ಪು ಬರಲು ದೀರ್ಘ ಸಮಯ ಹಿಡಿಯುತ್ತದೆ. ತ್ವರಿತ ನಿರ್ಧಾರ ಆಗಬೇಕು ಎಂದು ನಾವು ಬಯಸುತ್ತೇವೆ. ಆದ್ದರಿಂದ ಆತನನ್ನು ಗುಂಡಿಕ್ಕಿ ಹತ್ಯೆ ಮಾಡುವವರಿಗೆ ನಾವು 11 ಲಕ್ಷ ರುಪಾಯಿ ಬಹುಮಾನ ಘೋಷಿಸಿ ದ್ದೇವೆ’ ಎಂದು ಶರ್ಮಾ ಹೇಳಿದ್ದಾರೆ.