ವಿಶ್ವ ಸಾಂಸ್ಕೃತಿಕ ಉತ್ಸವದ ಕಟೌಟ್
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೆಹಲಿಯ ಯಮುನಾ ನದಿಯ ದಂಡೆಯ ಮೇಲೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ'ದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಶ್ವ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಕಾರ್ಯಕ್ರಮದಿಂದಾಗಿ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ಆದರೆ ಈಗಾಗಲೇ ಪ್ರಧಾನಿ, ರಾಷ್ಟ್ರಪತಿ ಹಾಗೂ ರವಿಶಂಕರ್ ಗುರೂಜಿ ಭಾವಚಿತ್ರ ಒಳಗೊಂಡ ಕಟೌಟ್ ಗಳು ದೆಹಲಿಯಾದ್ಯಂತ ರಾರಾಜಿಸುತ್ತಿವೆ.
ಈ ಮಧ್ಯೆ ಕಾರ್ಯಕ್ರಮದಿಂದ ಪರಿಸರ ಹಾನಿಯಾಗತ್ತದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ರವಿಶಂಕರ್ ಗುರೂಜಿ, ಈ ಉತ್ಸವ ವಿಶ್ವ ಶಾಂತಿಗೆ ಪ್ರಚಾರ ನೀಡಲಿದೆ. ಹೀಗಾಗಿ ಪರಿಸರ ಕಾರಣ ನೀಡುವುದು ಸರಿಯಲ್ಲ ಎಂದಿದ್ದಾರೆ.
ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್ ಮತ್ತು ರಸ್ತೆಗಳನ್ನು ನಿರ್ಮಾಣಮಾಡಿದೆ.