ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಮೇಲೆ ತೆರಿಗೆ ಹೇರುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ತನ್ನ ಪ್ರಸ್ತಾಪವನ್ನು ಹಿಂಪಡೆಯುವುದಾಗಿ ಮಂಗಳವಾರ ಹೇಳಿದೆ.
ಕಳೆದ ವಾರವಷ್ಟೇ ಕೇಂದ್ರ ಹಣಕಾಸು ಬಜೆಟ್ ಮಂಡಿಸಿದ್ದ ಜೇಟ್ಲಿ ಅವರು, 2016ರ ಎಪ್ರಿಲ್ 1ರ ನಂತರ ಇಪಿಎಫ್ ಖಾತೆಗೆ ಜಮೆಯಾಗುವ ಮೊತ್ತದ ಪೈಕಿ ಶೇ.60ರಷ್ಟನ್ನು ಹಿಂಪಡೆಯುವಾಗ ನೌಕರರು ಅದಕ್ಕೆ ತೆರಿಗೆ ಪಾವತಿಸಬೇಕು ಎಂದು ಹೇಳಿದ್ದರು. ಇಲ್ಲಿಯವರೆಗೂ ತೆರಿಗೆ ಮುಕ್ತವಾಗಿದ್ದ ಇಪಿಎಫ್ ಗೆ ತೆರಿಗೆ ಹೇರಿರುವುದಕ್ಕೆ ನೌಕರ ವರ್ಗದಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಒತ್ತಡಕ್ಕೆ ಮಣಿದಿರುವ ಜೇಯ್ಲಿ ಅವರು, ಸ್ವಯಂ ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು, ಬಜೆಟ್ ವೇಳೆ ಇಪಿಎಫ್ ಮೇಲಿನ ತೆರಿಗೆ ಪ್ರಸ್ತಾಪವನ್ನು ಸರ್ಕಾರ ಮಾಡಿತ್ತು. ಆದರೆ, ಪ್ರಸ್ತಾಪಕ್ಕೆ ನೌಕರರು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಹಿಂಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪ್ರಸ್ತಾಪಕ್ಕೆ ನಮಗೆ ದೊರೆತಿರುವ ಪ್ರತಿಕ್ರಿಯೆಗಳ ಆಧಾರದ ಮೇಲೆ ಈ ಪ್ರಸ್ತಾಪವನ್ನು ಸರ್ಕಾರ ಸಮಗ್ರವಾಗಿ ಮರು ಪರಿಶೀಲನೆ ಮಾಡಲು ಬಯಸಿದೆ. ಹೀಗಾಗಿ ಪ್ರಸ್ತಾಪವನ್ನು ಹಿಂಪಡೆಯುತ್ತಿದ್ದೇನೆಂದು ಹೇಳಿದ್ದಾರೆ. ಅಲ್ಲದೆ, ಇಪಿಎಫ್ ಹಿಂಪಡೆಯುವ ವೇಳೆ ರಾಷ್ಟ್ರೀಯ ವಿಮಾ ಯೋಜನೆಗೆ (ಎನ್ ಪಿಎಸ್) ಶೇ.40 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.