ನವದೆಹಲಿ: ಜೂನ್ 2014ರಲ್ಲಿ ಐಎಸ್ಐಎಸ್ ಉಗ್ರರಿಂದ ಅಪಹರಣಕ್ಕೊಳಗಾದ 39 ಭಾರತೀಯರು ಜೀವಂತವಾಗಿದ್ದು, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ಪಂಚಾಬ್ ಮೂಲದ ಭಾರತೀಯ ಕಾರ್ಮಿಕರ ಅಪಹರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಸುಷ್ಮಾ, ಇತ್ತೀಚಿಗಷ್ಟೇ ಈ ಸಂಬಂಧ ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ್ದು, ಅಪಹರಣಕ್ಕೊಳಗಾದ ಭಾರತೀಯರು ಜೀವಂತವಾಗಿದ್ದಾರೆ ಎಂದು ಎರಡು ಪ್ರಮುಖ ರಾಷ್ಟ್ರಗಳು ತಿಳಿಸಿರುವುದಾಗಿ ಹೇಳಿದರು.
2014ರ ಜೂನ್ ನಲ್ಲಿ ಪಂಜಾಬ್ ಮೂಲದ 40 ಕಾರ್ಮಿಕರನ್ನು ಐಎಸ್ಐಎಸ್ ಉಗ್ರರು ಅಪಹರಿಸಿದ್ದರು. ಆ ಪೈಕಿ ತಪ್ಪಿಸಿಕೊಂಡು ಬಂದಿದ್ದ ಒಬ್ಬ ವ್ಯಕ್ತಿ, ಉಳಿದವರನ್ನು ಉಗ್ರರು ಕೊಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದ. ಆದರೆ ಆತನ ಹೇಳಿಕೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ತಪ್ಪಿಸಿಕೊಂಡು ಬಂದಿರುವ ವ್ಯಕ್ತಿಯ ಹೇಳಿಕೆಯನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಅಪಹರಣಕ್ಕೊಳಗಾದ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂಬುದಕ್ಕೆ ಇದುವರೆಗೂ ಯಾವುದೇ ದಾಖಲೆಗಳಿಲ್ಲ. ಅವರು ಬದುಕಿರುವ ಸಾಧ್ಯತೆಗಳೇ ಹೆಚ್ಚು. ಇತ್ತೀಚಿಗೆ ಆರಬ್ ರಾಷ್ಟ್ರಗಳಿಗೆ ತೆರಳಿದ್ದಾಗ ಅಲ್ಲಿ ನಡೆಸಿದ ಮಾತುಕತೆಯಿಂದ ಸಹ ಇದು ಸ್ಪಷ್ಟವಾಗಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.