ನವದೆಹಲಿ: ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ವಿಶ್ವ ಸಾಂಸ್ಕೃತಿಕ ಹಬ್ಬ ಎಲ್ಲರನ್ನೂ ಒಗ್ಗೂಡಿಸಲು ಇರುವ ಹಬ್ಬ. ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಮನವಿ ಮಾಡಿದ್ದಾರೆ.
ವಿಶ್ವದ ಎಲ್ಲಾ ದೇಶದ ವಿವಿಧ ಧರ್ಮ ಹಾಗೂ ವರ್ಗಗಳ ಜನರನ್ನು ಹತ್ತಿರ ತರಲು, ಮನಸ್ಸುಗಳನ್ನು ಬೆಸೆಯಲು ಆಯೋಜಿಸುತ್ತಿರುವ ಹಬ್ಬ. ಇದರಲ್ಲಿ ರಾಜಕೀಯ ಕಾಣದೆ ಎಲ್ಲರೂ ಒಟ್ಟಾಗೋಣ ಎಂದು ರವಿಶಂಕರ ಗುರೂಜಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭದ್ರತೆಗೆ ಕೇಂದ್ರ ಸರ್ಕಾರ ಸೇನಾಪಡೆಯನ್ನು ನಿಯೋಜಿಸಿದ್ದಕ್ಕಾಗಿ ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ಗದ್ದಲ, ಕೋಲಾಹಲವೇರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕ್ರಮಕ್ಕೆಂದು ಮರವನ್ನು ಕಡಿದಿಲ್ಲ. ಮತ್ತು ಪರಿಸರ ಹಾಳು ಮಾಡುವುದಿಲ್ಲ. ಕಾರ್ಯಕ್ರಮದ ನಂತರ ಆ ಸ್ಥಳದಲ್ಲಿ ಜೈವಿಕ ಉದ್ಯಾನವನ ನಿರ್ಮಿಸುವ ಯೋಜನೆಯೂ ಆರ್ಟ್ ಆಫ್ ಲಿವಿಂಗ್ ಗೆ ಇದೆ ಎಂದು ರವಿಶಂಕರ ಗುರೂಜಿ ಈ ಹಿಂದೆ ತಿಳಿಸಿದ್ದರು.
ದೆಲ್ಲಿ ಪೊಲೀಸರ ಎಚ್ಚರಿಕೆ: ದೆಹಲಿಯ ಯಮುನಾ ನದಿ ದಂಡೆಯ ಮೇಲೆ ನಡೆಸುವ ಈ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಸುಮಾರು 35 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಇಷ್ಟೊಂದು ಜನರು ಪಾಲ್ಗೊಳ್ಳುವ ಸಂದರ್ಭದಲ್ಲಿ ಇಲ್ಲಿ ಕಾಲ್ತುಳಿತ, ಗೊಂದಲ, ಗದ್ದಲ ಮತ್ತು ಕ್ಷೋಭೆ ಸಂಭವಿಸುವ ಸಾಧ್ಯತೆ ಇದೆ; ಏಕೆಂದರೆ ಉತ್ಸವ ನಡೆಯುವ ತಾಣವು ಹಲವಾರು ಕೊರತೆಗಳನ್ನು, ಲೋಪಗಳನ್ನು ಹೊಂದಿದೆ' ಎಂದು ದೆಹಲಿ ಪೊಲೀಸರು ಎಚ್ಚರಿಕೆ ನೀಡಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆ ವರದಿ ಮಾಡಿದೆ.
ಯಮುನಾ ನದಿ ದಂಡೆಯಲ್ಲಿ ವಿಶ್ವ ಸಂಸ್ಕೃತಿ ಉತ್ಸವವನ್ನು ನಡೆಸುವುದೇ ಆದಲ್ಲಿ ಈ ಸಮಸ್ಯೆ ಮತ್ತು ಸವಾಲುಗಳಿಗೆ ತ್ವರಿತವಾಗಿ ಪರಿಹಾರವನ್ನು ಕಾಣಬೇಕಾಗಿದೆ; ಇಲ್ಲವಾದರೆ ಭಾರೀ ಅನಾಹುತ, ಅನರ್ಥ ಉಂಟಾಗಲಿದೆ. ಸಮ್ಮೇಳನ ನಡೆಯುವ ವೇದಿಕೆ ಕೂಡ ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂದು ತಿಳಿದಿಲ್ಲ ಎಂದು ದೆಹಲಿ ಪೊಲೀಸರು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.