ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾರತವನ್ನು ತೊರೆದು ವಿದೇಶಕ್ಕೆ ಹಾರಿದ್ದಾರೆಂಬ ಮಾಹಿತಿಯನ್ನು ಸರ್ಕಾರಿ ನ್ಯಾಯಮೂರ್ತಿಯವರು ನೀಡಿದ ಕೂಡಲೇ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಈಗೇನು ಮಾಡುವುದೆಂದು ಅಧಿಕಾರಿಗಳನ್ನು ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.
ಮಲ್ಯ ಅವರನ್ನು ವಿದೇಶಕ್ಕೆ ಹಾರಲು ಬಿಡಬಾರದೆಂದು ಹೇಳಿ ಬ್ಯಾಂಕ್ ಗಳ ಒಕ್ಕೂಟ ಈ ಹಿಂದೆ ಸುಪ್ರೀಂನಲ್ಲಿ ಅರ್ಜಿಯೊಂದನ್ನು ದಾಖಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿತ್ತು. ಆದರೆ, ವಿಚಾರಣೆ ನಡೆಸುವುದಕ್ಕೂ ಮುನ್ನವೇ ಮಲ್ಯ ಅವರು ವಿದೇಶಕ್ಕೆ ಹಾರಿರುವುದಾಗಿ ನ್ಯಾಯಮೂರ್ತಿಗಳು ನಿನ್ನೆ ಸುಪ್ರೀಂಗೆ ತಿಳಿಸಿದ್ದರು.
ನಂತರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಈಗೇನು ಮಾಡುವುದೆಂದು ಅಧಿಕಾರಿಗಳನ್ನು ಪ್ರಶ್ನಿಸಿದೆ. ನಂತರ ರಾಜ್ಯಸಭೆ ದಾಖಲೆಗಳಲ್ಲಿದ್ದ ಮಲ್ಯ ಅವರ ಅಧಿಕೃತ ಇಮೇಲ್ ಗೆ ವಿಳಾಸಕ್ಕೆ ಹಾಗೂ ಕೆಎಫ್ ಎ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇನ್ನಿತರರಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಲಂಡನ್ ಹೆಚ್ಚುವರಿ ಆಯೋಗದ ಮೂಲಕ ನೋಟಿಸ್ ಜಾರಿ ಮಾಡಿ: ಬ್ಯಾಂಕುಗಳಿಗೆ ಸುಪ್ರೀಂ
ವಿದೇಶಕ್ಕೆ ಹಾರಿರುವ ಮಲ್ಯ ಅವರಿಗೆ ಲಂಡನ್ ಹೆಚ್ಚುವರಿ ಆಯೋಗದ ಮೂಲಕ ನೋಟಿಸ್ ಜಾರಿಮಾಡುವಂತೆ ಬ್ಯಾಂಕುಗಳಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಲ್ಯ ಅವರು ಸಾಕಷ್ಟು ವ್ಯವಹಾರವನ್ನು ವಿದೇಶದಲ್ಲೇ ಮಾಡುತ್ತಿದ್ದು, ಅವರಿಗೆ ಲಂಡನ್ ಹೆಚ್ಚುವರಿ ಆಯೋಗದ ಮೂಲಕವೇ ನೋಟಿಸ್ ಮಾಡಿ ಎಂದು ನ್ಯಾಯಮೂರ್ತಿ ಮಕುಲ್ ರೊಹ್ಟಗಿ ಅವರು ಹೇಳಿದ್ದಾರೆ. ಅಲ್ಲದೆ, ಈ ಕುರಿತಂತೆ ಮಾರ್ಚ್ 30ರಂದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
900 ಕೋಟಿ ದುರ್ಬಳಕೆ ಮಾಡಿಕೊಂಡಿದ್ದ ಮಲ್ಯ: ಸಿಬಿಐ ಆರೋಪ
2009ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ, ಮಲ್ಯ ಅವರು ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್ ನಿಂದ ರು. 900 ಕೋಟಿ ಸಾಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತರಾತುರಿಯಲ್ಲಿ ಬ್ಯಾಂಕ್ ಗೆ ಇಷ್ಟು ಮೊತ್ತದ ಸಾಲ ನೀಡದಂತೆ ಕೆಲ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಅದನ್ನು ಪರಿಗಣಿಸದೆಯೇ ಕೇವಲ ಒಂದು ತಿಂಗಳಲ್ಲಿಯೇ ಅಷ್ಟೂ ಹಣವನ್ನು ಕಿಂಗ್ ಫಿಶರ್ ಗೆ ಪಾವತಿ ಮಾಡಲಾಗಿತ್ತು ಎಂದು ಸಿಬಿಐ ಆರೋಪ ವ್ಯಕ್ತಪಡಿಸಿದೆ.
ಐಡಿಬಿಐಗೆ ವಂಚನೆ ಮಾಡಿದ ಪ್ರಕರಣದಲ್ಲಿ 14 ಪುಟಗಳ ಎಫ್ ಐಆರ್ ದಾಖಲಿಸಿರುವ ಸಿಬಿಐ ಅದರಲ್ಲಿ ಈ ಮಾಹಿತಿಯನ್ನು ಸೇರಿಸಿದೆ. ಐಡಿಬಿಐನಿಂದ ಪಡೆದ ಸಾಲವನ್ನು, ತಾನು ಬೇರೆ ಕಡೆ ಮಾಡಿದ್ದ ಸಾಲ ಮರುಪಾವತಿಗೆ ಕಿಂಗ್ ಫಿಶರ್ ಬಳಸಿಕೊಂಡಿದೆ. ಜೊತೆಗೆ ಭಾರೀ ಪ್ರಮಾಣದ ಹಣವನ್ನು ಸುಳ್ಳು ದಾಖಲೆ ತೋರಿಸಿ ವಿದೇಶಕ್ಕೆ ರವಾನಿಸಲಾಗಿದೆ ಎಂದು ಹೇಳಿಕೊಂಡಿದೆ.