ದೇಶ

ಐಡಿಬಿಐನಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣ: 6 ಅಧಿಕಾರಿಗಳಿಗೆ ಸಮನ್ಸ್ ಜಾರಿ

Manjula VN

ನವದೆಹಲಿ: ಐಡಿಬಿಐ ಬ್ಯಾಂಕಿನಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬ್ಯಾಂಕ್ ನ 6 ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿರುವುದಾಗಿ ಶುಕ್ರವಾರ ತಿಳಿದುಬಂದಿದೆ.

ಐಡಿಬಿಐ ಬ್ಯಾಂಕ್ ನಿಂದ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಗೆ 900 ಕೋಟಿ ಹಣ  ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು. ಇದರಂತೆ ಬ್ಯಾಂಕ್ ನ 6 ಅಧಿಕಾರಿಗಳಿಗೆ ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಐಡಿಬಿಐ ಬ್ಯಾಂಕ್ ಮಾಜಿ ಅಧ್ಯಕ್ಷ ಯೋಗೇಶ್ ಅಗರ್ವಾಲ್, ಕಿಂಗ್ ಫಿಷರ್ ಏರ್ ಲೈನ್ಸ್ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಎರಡೂ ಸಂಸ್ಥೆಗಳ ಹಿರಿಯ ಕಾರ್ಯಕಾರಿ ಸದಸ್ಯರಿಗೆ ಸಮನ್ಸ್ ಜಾರಿಯಾಗಿರುವುದಾಗಿ ತಿಳಿದುಬಂದಿದೆ.

2009ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ, ಮಲ್ಯ ಅವರು ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್ ನಿಂದ ರು. 900 ಕೋಟಿ ಸಾಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತರಾತುರಿಯಲ್ಲಿ ಬ್ಯಾಂಕ್ ಗೆ ಇಷ್ಟು ಮೊತ್ತದ ಸಾಲ ನೀಡದಂತೆ ಕೆಲ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ಅದನ್ನು ಪರಿಗಣಿಸದೆಯೇ ಕೇವಲ ಒಂದು ತಿಂಗಳಲ್ಲಿಯೇ ಅಷ್ಟೂ ಹಣವನ್ನು ಕಿಂಗ್ ಫಿಶರ್ ಗೆ ಪಾವತಿ ಮಾಡಲಾಗಿತ್ತು ಎಂದು ಸಿಬಿಐ ಈ ಹಿಂದೆ ಆರೋಪ ವ್ಯಕ್ತಪಡಿಸಿತ್ತು.

ಐಡಿಬಿಐಗೆ ವಂಚನೆ ಮಾಡಿದ ಪ್ರಕರಣದಲ್ಲಿ 14 ಪುಟಗಳ ಎಫ್ ಐಆರ್ ದಾಖಲಿಸಿದ್ದ ಸಿಬಿಐ ಅದರಲ್ಲಿ ಈ ಮಾಹಿತಿಯನ್ನು ಸೇರಿಸಿತ್ತು. ಐಡಿಬಿಐನಿಂದ ಪಡೆದ ಸಾಲವನ್ನು, ತಾನು ಬೇರೆ ಕಡೆ ಮಾಡಿದ್ದ ಸಾಲ ಮರುಪಾವತಿಗೆ ಕಿಂಗ್ ಫಿಶರ್ ಬಳಸಿಕೊಂಡಿದೆ. ಜೊತೆಗೆ ಭಾರೀ ಪ್ರಮಾಣದ ಹಣವನ್ನು ಸುಳ್ಳು ದಾಖಲೆ ತೋರಿಸಿ ವಿದೇಶಕ್ಕೆ ರವಾನಿಸಲಾಗಿದೆ ಎಂದು ಹೇಳಿತ್ತು.

SCROLL FOR NEXT