ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣೆಗೆ ಎಡಪಕ್ಷ ಸಿಪಿಐ(ಎಂ) ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಮಾಜವಾದಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.
ಸಿಪಿಐ(ಎಂ)- ಕಾಂಗ್ರೆಸ್ ನೇತೃತ್ವದ ಮೈತ್ರಿಯಿಂದ ದೂರವಿರುವುದಾಗಿ ಘೋಷಿಸಿರುವ ಸಮಾಜವಾದಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸುವುದಾಗಿ ಸ್ಪಷ್ಟಪಡಿಸಿದೆ. 25 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಸಭೆ ಸದಸ್ಯ ಕಿರಣ್ ಮೋಯ್ ನಂದ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವುದು ಸಮಾಜವಾದಿ ಪಕ್ಷದ ತತ್ವವಾಗಿದೆ, ಎಡಪಕ್ಷಗಳು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸ್ವತಂತ್ರವಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಎಂದು ಸಮಾಜವಾದಿ ಪಕ್ಷ ಸ್ಪಷ್ಟಪಡಿಸಿದೆ. 1980 ರಿಂದ ಎಡಪಕ್ಷಗಳ ನೇತೃತ್ವದ ಮೈತ್ರಿಕೂತದಲ್ಲಿದ್ದ ಸಮಾಜವಾದಿ ಪಕ್ಷ 2011 ರ ವಿಧಾನಸಭಾ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದಿತ್ತು.