ಕೋಲ್ಕತಾ: ಪಶ್ಚಿಮ ಬಂಗಾಳದ ಪೊಲೀಸರು ಸತ್ತ ವ್ಯಕ್ತಿಗಳಿಗೆ ನೋಟೀಸ್ ಜಾರಿ ಮಾಡಿರುವ ವಿಲಕ್ಷಣ ಘಟನೆ ವರದಿಯಾಗಿದೆ.
ನಿಧನರಾಗಿರುವ ನಾಲ್ಕು ವ್ಯಕ್ತಿಗಳ ವಿರುದ್ದ ಪಶ್ಚಿಮ ಬಂಗಾಳದ ಪೊಲೀಸರು ಎಫ್ ಐಆರ್ ದಾಖಲಿಸಿ, ನೋಟೀಸ್ ಜಾರಿ ಮಾಡಿದ್ದಾರೆ.
ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆಂಬ ಆರೋಪದ ಮೇಲೆ ನಿಧನರಾಗಿರುವ ನಾಲ್ಕು ಮಂದಿಗೆ ನೋಟೀಸ್ ಜಾರಿ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಶರಣಾಗುವಂತೆ ಸೂಚಿಸಿದ್ದಾರೆ.
ಪೊಲೀಸರ ಈ ನೋಟೀಸ್ ನೋಡಿ ಹೂಗ್ಲಿ ಜಿಲ್ಲೆಯ ಚಂದರ್ ನಗೋರ್ ಮುನಿಸಿಪಲ್ ಕಾರ್ಪೋರೇಷನ್ ನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಇದೇನಪ್ಪಾ ಈಗಾಗಲೇ ಸತ್ತು ಯಮಲೋಕದಲ್ಲಿರುವವರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆಂದು ಗಾಬರಿಗೊಂಡಿದ್ದಾರೆ.
ನಿಧನರಾಗಿರುವ ಈ ನಾಲ್ಕು ಮಂದಿ ಕೆರೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ ಪೊಲೀಸರ ಈ ಆರೋಪವನ್ನು ತಳ್ಳಿ ಹಾಕಿರುವ ನಿಧನರಾಗಿರುವ ನಾಲ್ವರು ಕುಟುಂಬ ಸದಸ್ಯರು, ಕೆರೆಯನ್ನು ಒತ್ತುವರಿ ಮಾಡಿರುವುದು ಬಿಲ್ಡರ್ ಗಳು, ಅವರನ್ನು ರಕ್ಷಿಸಲು ಪೊಲೀಸರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಸ್ಥಳೀಯ ದೇವಸ್ಥಾನಕ್ಕೆ ಸೇರಿದ ಜಾಗವಾಗಿದ್ದು, ಇದನ್ನು ಬಿಲ್ಡರ್ ಗಳು ತಮ್ಮ ಅಕ್ರಮಗಳ ಕೆಲಸಗಳಿಗೆ ಬಳಿಸಿಕೊಳ್ಳುತ್ತಿದ್ದಾರೆ. ಅವರ ಬೆಂಬಲಕ್ಕೆ ಪೊಲೀಸರು ನಿಂತಿದ್ದು, ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಕರಣವನ್ನು ಬೇರೆ ಕಡೆಗೆ ತಿರುಚಿ ಬಿಲ್ಡಿರ್ ಗೆ ಸಹಾಯ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಿಧನರಾಗಿರುವ ನಾಲ್ವರು ಆರೋಪಿಗಳೆಂದರೆ,
ಕಲಿಚಂದ್ರ ಬೊಡಕ್ - 1970ರಲ್ಲಿ ನಿಧನ,
ಬಿಪಿನ್ ಬಿಹಾರಿ - 1973ರಲ್ಲಿ ನಿಧನ,
ದುರ್ಗಾ ಚರಣ್ ಬೊಡಕ್ - 1981 ನಿಧನ
ರಂಗಲಾಲ್ ಬೊಡಕ್- 4 ವರ್ಷಗಳ ಹಿಂದೆ ನಿಧನರಾಗಿದ್ದಾರೆ.