ದೇಶ

ಟಿಎಂಸಿ ಸಂಸದರ ಭ್ರಷ್ಟಾಚಾರ ಪ್ರಕರಣ: ಲೋಕಸಭಾ ನೀತಿ ಸಮಿತಿಯಿಂದ ತನಿಖೆ

Lingaraj Badiger
ನವದೆಹಲಿ: ತೃಣಮೂಲ ಕಾಂಗ್ರೆಸ್ ನ ಸಂಸದರ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಲೋಕಸಭಾ ನೀತಿ ಸಮಿತಿ ತನಿಖೆ ನಡೆಸಲಿದೆ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬುಧವಾರ ಘೋಷಿಸಿದ್ದಾರೆ. 
ಪ್ರಶ್ನೋತ್ತರ ಅವಧಿಯ ನಂತರ ಬಿಜೆಪಿ, ಕಾಂಗ್ರೆಸ್ ಹಾಗೂ ಸಿಪಿಐಎಂನ ಸದಸ್ಯರು ಒಟ್ಟಾಗಿ ಟಿಎಂಸಿ ಸಂಸದರ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಟಿಎಂಸಿ ಸಂಸದರ ವಿರುದ್ಧ ಗಂಭೀರ ಆರೋಪ ಬಂದಿದ್ದು, ಇದು ಸಂಸತ್ತಿನ ವಿಶ್ವಾಸಾರ್ಹತೆಯ ಪ್ರಶ್ನೆ ಎಂದರು. ಅಲ್ಲದೆ ಈ ಕುರಿತು ಲೋಕಸಭಾ ನೀತಿ ಸಮಿತಿ ತನಿಖೆ ನಡೆಸಲಿದೆ ಎಂದು ಘೋಷಿಸಿದರು.
ಟಿಎಂಸಿಯ ಸಂಸದರು ಹಾಗೂ ಶಾಸಕರು ನಕಲಿ ಕಂಪನಿಯೊಂದರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವಿಡಿಯೋ ದೃಶ್ಯಾವಳಿ ಹಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಿನ್ನೆ ಲೋಕಸಭೆ ಕಲಾಪದ ವೇಳೆ ತೀವ್ರ ಗದ್ದಲ, ಕೋಲಾಹಲ ನಡೆದಿತ್ತು. ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ಸದಸ್ಯರು ಸಂಸದೀಯ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಖಾಸಗಿ ಸುದ್ದಿ ಪೋರ್ಟಲ್ ವೊಂದು ಸೋಮವಾರ ಕುಟುಕು ಕಾರ್ಯಾಚರಣೆಯ ವಿಡಿಯೋ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಟಿಎಂಸಿಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ಸಿಪಿಎಂ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಸುದ್ದಿ ಜಾಲದ ಕುಟುಕು ಕಾರ್ಯಾಚರಣೆ ಸಿಪಿಎಂ, ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಲ್ಲಿ ಒಂದು ಮಾಡಿದ್ದು, ಟಿಎಂಸಿ ನಾಯಕರ ವಿರುದ್ಧ ಭಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸು ದಾಖಲಿಸುವಂತೆ ಒತ್ತಾಯಿಸಿದರು. ಅಲ್ಲದೆ ಲಂಚ ಆರೋಪದ ವಿರುದ್ಧ ತನಿಖೆ ನಡೆಸಲು ವಿಶೇಷ ಸಂಸದೀಯ ತಂಡವನ್ನು ರಚಿಸುವಂತೆ ಒತ್ತಾಯಿಸಿದ್ದರು.
SCROLL FOR NEXT