ಚಂಡೀಘಡ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಹಾಗೂ ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್ ನಡುವಿನ ವಿವಾದಿತ ಭೂ ಖರೀದಿ ಒಪ್ಪಂದದ ತನಿಖೆ ನಡೆಸಿರುವ ಸಮಿತಿ, ಹರಿಯಾಣಾದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರಿಗೆ ಬುಧವಾರ ಸಮನ್ಸ್ ನೀಡಿದೆ.
ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಗೆ ವಾಣಿಜ್ಯ ಭೂಮಿ ಪರವಾನಗಿ ನೀಡಿದ ವಿಚಾರವಾಗಿ ಸಮಿತಿ ತನಿಖೆ ನಡೆಸಿದೆ. ಹಗರಣ ಕುರಿತು ಹೇಳಿಕೆ ನೀಡಲು ಮಾರ್ಚ್ 23ರಂದು ಆಯೋಗದ ಎದುರು ಹಾಜರಾಗುವಂತೆ 2015ರಲ್ಲಿ ನೇಮಿಸಿದ್ದ ನ್ಯಾಯಮೂರ್ತಿ ಎಸ್.ಎನ್ ದಿಂಗ್ರಾ ಸಮಿತಿ ಹೂಡಾಗೆ ಸಮನ್ಸ್ ನೀಡಿದೆ.
ಇನ್ನು ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಹೂಡಾ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಹೂಡಜಾ ಆರೋಪಿಸಿದ್ದಾರೆ. ಆಯೋಗದ ಮುಂದೆ ನಾನು ನಿರಪರಾಧಿ ಎಂದು ಸಾಬೀತು ಮಾಡುತ್ತೇನೆ ಎಂದು ಹೂಡಾ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆ ದಾಖಲಿಸಲು ಹರಿಯಾಣಾದ ಮುಖ್ಯ ಕಾರ್ಯದರ್ಶಿ ದೀಪಿಂದರ್ ಸಿಂಗ್ ದೇಸಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳಿಗೆ ಆಯೋಗ ಕಳೆದ ತಿಂಗಳು ಸಮನ್ಸ್ ನೀಡಿತ್ತು.
ಇನ್ನೂ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಸಮನ್ಸ್ ನೀಡಿರುವುದನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸ್ವಾಗತಿಸಿದ್ದಾರೆ. ಹೂಡಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯನ ಸೇವಕನಂತೆ ವರ್ತಿಸುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.