ಪಾಟ್ನಾ : ಸಾಂಸ್ಕೃತಿಕ ರಾಯಭಾರಿಯಾಗಿರುವ ಅಮಿತಾಭ್ ಅವರನ್ನು ದೇಶದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದರೆ ಅದು ದೇಶದ ಹೆಮ್ಮೆಯ ವಿಚಾರವಾಗುತ್ತದೆ ಎಂದು ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ.
ಬಿಗ್ ಬಿ ಅಮಿತಾಭ್ ಬಚ್ಚನ್ ಪರ ಬ್ಯಾಟಿಂಗ್ ಮಾಡಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಅಮಿತಾಬ್ ಅವರನ್ನು ಭಾರತದ ಮುಂದಿನ ರಾಷ್ಟ್ರಪತಿಯಾಗಿ ನೋಡುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ.
ಬಚ್ಚನ್ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಲವು ಮೈಲುಗಲ್ಲುಗಳನ್ನು ದಾಟಿದ್ದಾರೆ. ಇಂಥ ವ್ಯಕ್ತಿ ರಾಷ್ಟ್ರಪತಿಯಾದರೆ ದೇಶಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ನಿಮ್ಮನ್ನು ಅಮಿತಾಭ್ ಬೆಂಬಲಿಸುತ್ತಿದ್ದಾರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ''ಅದು ಅವರ ದೊಡ್ಡತನ. ಪ್ರಣಬ್ ಮುಖರ್ಜಿ ಅವರ ನಂತರ ಅವರೇ ಆ ಸ್ಥಾನ ಅಲಂಕರಿಸಿದರೆ ಬಹಳ ಸಂತೋಷವಾಗುತ್ತದೆ,'' ಎಂದು ಹೇಳಿದ್ದಾರೆ.