ಕಂಪನಿಗಳು ಸಾಲ ಮರು ಪಾವತಿ ಮಾಡದಿದ್ದರೆ ಶ್ಯೂರಿಟಿ ನೀಡಿದವರ ಆಸ್ತಿಯನ್ನೇ ಮಾರಾಟ ಮಾಡಿ: ಕೇಂದ್ರ
ಬ್ಯಾಂಕ್ ಗಳಿಂದ ಸಾಲ ಪಡೆದು ಮರು ಪಾವತಿ ಮಾಡದೇ ವಂಚಿಸುವ ವಿಜಯ್ ಮಲ್ಯಯಂತವರಿಗೆ ಪಾಠ ಕಲಿಸಲು...
ನವದೆಹಲಿ: ಬ್ಯಾಂಕ್ ಗಳಿಂದ ಭಾರಿ ಮೊತ್ತದ ಸಾಲ ಪಡೆದು ಮರು ಪಾವತಿ ಮಾಡದೇ ವಂಚಿಸುವ ವಿಜಯ್ ಮಲ್ಯಯಂತವರಿಗೆ ಪಾಠ ಕಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಸಾಲ ಮರು ಪಾವತಿ ಮಾಡದ ಕಂಪನಿಗಳಿಗೆ ವೈಯಕ್ತಿಕ ಶ್ಯೂರಿಟಿ ನೀಡಿದವರ ಆಸ್ತಿಯನ್ನೇ ಮಾರಾಟ ಮಾಡುವಂತೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಸೂಚಿಸಿದೆ.
ಈ ಸಂಬಂಧ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಮುಖ್ಯಸ್ಥರಿಗೆ ನಿರ್ದೇಶ ನೀಡಿರುವ ವಿತ್ತ ಸಚಿವಾಲಯ, ಒಂದು ಸಾಲ ಮರುಪಾವತಿ ಮಾಡದಿದ್ದರೆ ಭದ್ರತೆ ನೀಡಿದವರ ಆಸ್ತಿಯನ್ನೇ ಮಾರಾಟ ಮಾಡುವಂತೆ ಸೂಚಿಸಿದೆ.
ಸಾಲ ಮರು ಪಾವತಿ ಮಾಡದಿದ್ದರೆ ಶ್ಯೂರಿಟಿ ನೀಡಿದವರ ಆಸ್ತಿ ವಶಪಡಿಸಿಕೊಳ್ಳುವುದಾಗಿ ಸಾಲ ನೀಡುವ ಸಂದರ್ಭದಲ್ಲಿ ಬ್ಯಾಂಕ್ ಗಳು ಹೇಳಿರುತ್ತವೆ. ಆದರೆ ಶ್ಯೂರಿಟಿ ನೀಡಿದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದು ತುಂಬಾ ವಿರಳ. ಹೀಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಮದ್ಯದ ದೊರೆ ವಿಜಯ್ ಮಲ್ಯ ಅವರು ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದು, ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ ಸೇರಿದಂತೆ ಹಲವು ಸಂಸ್ಥೆಗಳು ತನಿಖೆ ನಡೆಸುತ್ತಿವೆ.