ಪ್ರೇಮಸೌಧ ತಾಜ್ಮಹಲ್`ಗೆ ವಾನರ ಸೇನೆ ಲಗ್ಗೆ, ಪ್ರವೇಶ ದ್ವಾರಗಳಲ್ಲೇ ಕಾಟ; ಪ್ರವಾಸಿಗರಿಗೆ ಆತಂಕ, ಇಬ್ಬರು ಆಸ್ಪತ್ರೆಗೆ ದಾಖಲು! Video

ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ, ಭಾರತದ ಪ್ರಸಿದ್ಧ ಪ್ರವಾಸಿ ತಾಣ ತಾಜ್ಮಹಲ್ಗೆ ವಾನರ ಸೇನೆ ಲಗ್ಗೆ ಇಟ್ಟಿದ್ದು, ಇದು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.
ತಾಜ್ಮಹಲ್ನ ಪೂರ್ವ, ಪಶ್ಚಿಮ ಹಾಗೂ ರಾಯಲ್ ಗೇಟ್ಗಳ ಸುತ್ತ ಮಂಗಗಳ ಗುಂಪು ಬೀಡುಬಿಟ್ಟಿದ್ದು, ಸ್ಮಾರಕದ ಪ್ರವೇಶ ದ್ವಾರಗಳ ಸುತ್ತಲೂ ಗುಂಪುಗುಂಪಾಗಿ ಓಡಾಡುತ್ತಿರುವ ಮಂಗಗಳು ಪ್ರವಾಸಿಗರ ಮೇಲೆ ದಾಳಿ ಮಾಡುವ ಆತಂಕ ಸೃಷ್ಟಿಸಿವೆ. ವಿದೇಶಿ ಪ್ರವಾಸಿಗರೂ ಮಂಗಗಳ ದಾಳಿಗೆ ತುತ್ತಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಸ್ಮಾರಕದ ಆವರಣದಲ್ಲಿ ಮಂಗಗಳು ಗುಂಪುಗುಂಪಾಗಿ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರವಾಸಕ್ಕೆ ಬರುವ ಭಾರತೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಮಂಗಗಳ ದಾಳಿಯ ಅಪಾಯ ಎದುರಿಸುತ್ತಿದ್ದಾರೆ.
ತಾಜ್ಮಹಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮಂಗಗಳನ್ನು ಹಿಡಿಯಲು ಅಥವಾ ಅವುಗಳನ್ನು ಅಲ್ಲಿಂದ ಓಡಿಸಲು ಅಧಿಕಾರಿಗಳು ಹಲವು ಬಾರಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ತಾಜ್ಮಹಲ್ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಮಂಗಗಳ ಹಾವಳಿ ನಿಯಂತ್ರಣಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ.
ವಿದೇಶಿ ಪ್ರವಾಸಿಗರಿಗೂ ಮಂಗಗಳ ಕಾಟ
ಕೆಲವು ತಿಂಗಳ ಹಿಂದೆ ತಾಜ್ಮಹಲ್ ಆವರಣದಲ್ಲಿರುವ ಕಾರಂಜಿಯೊಂದರಲ್ಲಿ ಮಂಗಗಳು ನೀರಾಟವಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾರಂಜಿಗೆ ಹಾರುತ್ತಿದ್ದ ಮಂಗಗಳು ನೀರನ್ನು ಚಿಮ್ಮಿಸುತ್ತಾ, ಒಂದನ್ನೊಂದು ಅಟ್ಟಿಸಿಕೊಂಡು ಓಡಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದವು.
ಇನ್ನು ಕಳೆದ ಸೆಪ್ಟೆಂಬರ್ನಲ್ಲಿ ತಾಜ್ಮಹಲ್ ವೀಕ್ಷಣೆಗೆ ಬಂದಿದ್ದ ಇಬ್ಬರು ಪ್ರವಾಸಿಗರಿಗೆ ಮಂಗಗಳು ಕಚ್ಚಿದ್ದವು. ಪರಿಣಾಮ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡವರಲ್ಲಿ ಬ್ರೆಜಿಲ್ನ 83 ವರ್ಷದ ವೃದ್ಧ ಪ್ರವಾಸಿಗ ಹಾಗೂ ಪಶ್ಚಿಮ ಬಂಗಾಳದ ಮತ್ತೊಬ್ಬ ಪ್ರವಾಸಿಗ ಸೇರಿದ್ದರು.
ಭಾರತದ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ತಾಜ್ಮಹಲ್ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಪ್ರಮುಖ ಪ್ರವಾಸಿ ತಾಣದಲ್ಲಿ ಮಂಗಗಳ ಹಾವಳಿ ಹೆಚ್ಚುತ್ತಿರುವುದು ಪ್ರವಾಸಿಗರ ಸುರಕ್ಷತೆ ಹಾಗೂ ದೇಶದ ಪ್ರವಾಸೋದ್ಯಮದ ವರ್ಚಸ್ಸಿನ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



