ಡೆಹ್ರಾಡೂನ್: ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಉತ್ತರಾಖಂಡ್ ರಾಜ್ಯಪಾಲ ಕೆ.ಕೆ.ಪೌಲ್ ಅವರು ಶನಿವಾರ ಮುಖ್ಯಮಂತ್ರಿ ಹರಿಶ್ ರಾವತ್ ಅವರಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ನ ಒಂಬತ್ತು ಶಾಸಕರು ಬಂಡಾಯವೆದ್ದ ಹಿನ್ನೆಲೆಯಲ್ಲಿ ಉತ್ತರಾಖಂಡನ್ ನಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಮಾರ್ಚ್ 28ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರು ಸೂಚಿಸಿದ್ದಾರೆ.
ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಹರಿಶ್ ರಾವತ್ ಅವರು ನಾಳೆ ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡಿ, ಮುಂದಿನ ಕ್ರಮದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಇದಕ್ಕು ಮುನ್ನ ಮಾತನಾಡಿದ್ದ ಹರಿಶ್ ರಾವತ್, ವಿಧಾನಸಭೆಯಲ್ಲಿ ನಾನು ಇನ್ನೂ ಸಂಪೂರ್ಣ ಬಹುಮತ ಹೊಂದಿದ್ದೇನೆ ಎಂಬ ವಿಶ್ವಾಸವಿದೆ ಮತ್ತು ಸದನದಲ್ಲಿ ಅದನ್ನು ಸಾಬೀತುಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಒಂಬತ್ತು ಬಂಡಾಯ ಶಾಸಕರ ಪೈಕಿ ಐವರು ತಮ್ಮ ಸಂಪರ್ಕದಲ್ಲಿದು, ಅವರು ಸರ್ಕಾರ ತೊರೆಯುವುದಿಲ್ಲ ಎಂದು ಹೇಳಿದ್ದರು.
ಉತ್ತರಾಖಂಡ ವಿಧಾನಸಭೆಯು ಒಟ್ಟು 70 ಸದಸ್ಯರನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ 28 ಸ್ಥಾನಗಳನ್ನು ಗೆದ್ದಿತ್ತು. ಈಗ ಕಾಂಗ್ರೆಸ್‌ನ 9 ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿರುವುದರಿಂದ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಬಂಡಾಯ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ.