ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ಎನ್ ಸಿ ನಾಯಕ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ರಾಜ್ಯಪಾಲ ಎನ್ಎನ್ ವೋಹ್ರಾ ಅವರನ್ನು ಭೇಟಿ ಮಾಡಿದ್ದಾರೆ.
ಸರ್ಕಾರ ರಚನೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಪರ್ಯಾಯ ಮಾರ್ಗದ ಸಲಹೆ ನೀಡುವುದಿಲ್ಲ, ಬದಲಾಗಿ ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸುವುದರ ಪರವಾಗಿದೆ ಎಂದು ಓಮರ್ ಅಬ್ದುಲ್ಲಾ ರಾಜ್ಯಪಾಲರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಆದರೆ ಸರ್ಕಾರ ರಚನೆ ಸಾಧ್ಯವಾಗದೇ ಇದ್ದರೆ, ಮಧ್ಯಂತರ ಚುನಾವಣೆಯೊಂದೇ ಮಾರ್ಗ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಗೆ ತೆರಳಿ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸುವುದು ಮೆಹಬೂಬಾ ಮುಫ್ತಿ ಅವರ ಕೊನೆಯ ಪ್ರಯತ್ನವಾಗಿದೆ. ಪಕ್ಷವನ್ನು ಉಳಿಸಿಕೊಳ್ಳಲು ಮೆಹಬೂಬಾ ಮುಫ್ತಿ ಈ ರೀತಿಯ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಷರರ್ತ್ತುಗಳಿಗೆ ಅನುಗುಣವಾಗಿ ಸರ್ಕಾರ ರಚನೆ ಸಾಧ್ಯವಾಗದೇ ಇದ್ದರೆ ಪಿಡಿಪಿ ಪಕ್ಷ ಇಬ್ಭಾಗವಾಗುತ್ತದೆ, ಹಾಗಾದರೆ ಮತ್ತಷ್ಟು ದುರ್ಬಲವಾಗುತ್ತೇನೆ ಎಂಬುದು ಮೆಹಬೂಬಾ ಮುಫ್ತಿ ಅವರಿಗೆ ಅರ್ಥವಾಗಿದೆ ಎಂದು ಓಮರ್ ಅಬ್ದುಲ್ಲಾ ರಾಜ್ಯಪಾಲರ ಭೇಟಿ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ- ಮೆಹಬೂಬಾ ಮುಫ್ತಿ ಭೇಟಿ ಬಳಿಕ ಸರ್ಕಾರ ರಚನೆ ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.