ಶ್ರೀನಗರ: ಜಮ್ಮು-ಕಾಶ್ಮೀರದ ಪಕ್ಷೇತರ ಶಾಸಕ ಶೇಖ್ ಅಬ್ದುಲ್ ರಶೀದ್ ಪಿಡಿಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದ ನಾಯಕತ್ವ ಕಾಶ್ಮೀರಿಗಳಿಗೆ ನೋವುಂಟಾಗುವಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ರಚನೆ ಬಗ್ಗೆ ಮಾತನಾಡಿರುವ ಪಕ್ಷೇತರ ಶಾಸಕ ರಶೀದ್, ಅಧಿಕಾರ ಹಿಡಿಯುವುದಕ್ಕೆ ಪಿಡಿಪಿ ತನ್ನತನವನ್ನು ಬಿಟ್ಟುಕೊಡುವ ಮೂಲಕ ಕಾಶ್ಮೀರಿಗಳಿಗೆ ನೋವುಂಟುಮಾಡುತ್ತಿದೆ. ಕಾಶ್ಮೀರಿಗಳು ಭಿಕ್ಷುಕರಲ್ಲ, ನವದೆಹಲಿಯಿಂದ ಸಿಗುವ ಒಪ್ಪಿಗೆಯ ಅಗತ್ಯವಿಲ್ಲ, ಸಂಘಪರಿವಾರದ ಕಾರ್ಯಸೂಚಿಯಿಂದ ನಾವು ಅಂತರ ಕಾಯ್ದುಕೊಂಡಿದ್ದೇವೆ ಎಂದು ಶೇಖ್ ರಶೀದ್ ಹೇಳಿದ್ದಾರೆ.
ಪ್ರಧಾನಿ ಮೋದಿ ಭೇಟಿ ವೇಳೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಹುರಿಯತ್ ನಾಯಕರೊಂದಿಗೆ ಚರ್ಚೆ ನಡೆಸಲು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮನವೊಲಿಕೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಪಿಡಿಪಿ ನಾಯಕಿಯನ್ನು ಶರಣಾಗುವಂತೆ ಮಾಡಿದೆ. ಅಧಿಕಾರದ ಆಸೆ ಇದ್ದಿದ್ದರೆ ಮೆಹಬೂಬಾ ಮುಫ್ತಿ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರದ ದಿನವೇ ಬಿಜೆಪಿಗೆ ಶರಣಾಗಬಹುದಿತ್ತು. ಈ ವರೆಗೂ ಕಾಯುವ ಅಗತ್ಯವಿರಲಿಲ್ಲ ಎಂದು ಶೇಖ್ ರಶೀದ್ ಹೇಳಿದ್ದಾರೆ.