ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಟಿವಿ ವಾಹಿನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಮುಖರ್ಜಿ ಅವರು ಜಾಮೀನು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಪೀಟರ್ ಮುಖರ್ಜಿ ಸಲ್ಲಿಸಿದ್ದ ಮೊದಲ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪೀಟರ್ ಮುಖರ್ಜಿಯ ಪರ ವಕೀಲ ಕುಶಾಲ್ ಮೊರ್ ಅವರು ಬುಧವಾರ ಎರಡನೇ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಪೀಟರ್ ಮುಖರ್ಜಿ ತಪ್ಪಿತಸ್ಥ ಎಂದು ಸಾಬೀತುಪಡಿಸಲು ಯಾವುದೇ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ಆರೋಪಿಯನ್ನು ಬಂಧನದಲ್ಲಿಡುವ ಅಗತ್ಯ ಇಲ್ಲ. ಹೀಗಾಗಿ ಆರೋಪಿಗೆ ಜಾಮೀನು ನೀಡಬೇಕು ಎಂದು ಪೀಟರ್ ಮುಖರ್ಜಿ ಪರ ವಕೀಲರು ಸಿಬಿಐ ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ಮುಖರ್ಜಿ ವಿರುದ್ಧ ಕೊಲೆ, ಸಂಚು ಮತ್ತು ಪುರಾವೆ ನಾಶದ ಆರೋಪ ದಾಖಲಾಗಿದೆ.