ದೇಶ

ಬುಂಧೇಲ್‌ಖಂಡ್‌ ದಲ್ಲಿ ಬರ; ಆದ್ರೂ ಉ.ಪ್ರದೇಶ ಸಚಿವರಿಂದ ವಿದೇಶ ಪ್ರವಾಸ

Lingaraj Badiger
ಲಖನೌ: ಉತ್ತರ ಪ್ರದೇಶದ ಬುಂಧೇಲ್‌ಖಂಡ್‌ ನಿರಂತರ ನಾಲ್ಕನೇ ವರ್ಷ ಬರಗಾಲ ಎದುರಿಸುತ್ತಿದೆ.ಬೆಳೆ ನಷ್ಟದಂದ ರೈತರು ಕಂಗಾಲಾಗಿದ್ದಾರೆ. ಹಾಗಿದ್ದರೂ ರಾಜ್ಯದ 17 ಮಂದಿ ಸಚಿವರು ಮತ್ತು ಶಾಸಕರು "ಅಧ್ಯಯನ ಪ್ರವಾಸ'ದ ನೆಪದಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಶಾಪಿಂಗ್‌ ಮತ್ತು ಸೈಟ್‌ ಸೀಯಿಂಗ್‌  ಈ ವಿದೇಶ ಪ್ರವಾಸದ ಮುಖ್ಯ ವಿಷಯವಾಗಿದ್ದು ಆಸ್ಟೇಲಿಯ, ನ್ಯೂಜೀಲ್ಯಾಂಡ್‌ ಮತ್ತು ಜಪಾನ್‌ ದೇಶಗಳಿಗೆ ಇವರು ಭೇಟಿ ನೀಡಲಿದ್ದಾರೆ.
ಒಟ್ಟು 18 ದಿನಗಳ ಈ ಸುದೀರ್ಘ‌ "ಅಧ್ಯಯನ' ವಿದೇಶ ಪ್ರವಾಸದಲ್ಲಿ ಉತ್ತರ ಪ್ರದೇಶ ಶಾಸಕರು ಮತ್ತು ಸಚಿವರು ಜಪಾನ್‌ ಸಹಿತ ಮೂರು ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವಿದೇಶ ಪ್ರವಾಸದ ಎಲ್ಲ ಖರ್ಚು ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸುತ್ತಿದೆ.
ವಿದೇಶ ಪ್ರವಾಸಕ್ಕೆ ಹೋಗಿರುವವರಲ್ಲಿ  17 ಮಂದಿಯಲ್ಲಿ 15 ಮಂದಿ ಶಾಸಕರು ಆಳುವ ಪಕ್ಷದವರೇ ಆಗಿದ್ದಾರೆ. ಉಳಿದ ಇಬ್ಬರಲ್ಲಿ ಒಬ್ಬರು ಕಾಂಗ್ರೆಸ್‌ ಶಾಸಕ (ಪ್ರದೀಪ್‌ ಮಾಥುರ್‌) ಮತ್ತು ಇನ್ನೊಬ್ಬರು ಆರ್‌ಜೆಡಿ ಶಾಸಕ (ದಳವೀರ್‌ ಸಿಂಗ್‌). ಉತ್ತರ ಪ್ರದೇಶದ ವಿಧಾನಸಭಾ ಸ್ಪೀಕರ್‌ ಎಂ ಪಿ ಪಾಂಡೆ ಅವರು ವಿದೇಶ ಪ್ರವಾಸದ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ನಾಯಕರು: ಸಮಾಜವಾದಿ ಪಕ್ಷದ ಆಜಂ ಖಾನ್‌, ರಘುಬರ್‌ ಪ್ರತಾಪ್‌ ಸಿಂಗ್‌, ಓಂ ಪ್ರಕಾಶ್‌ ಸಿಂಗ್‌, ಆಶಾ ಕಿಶೋರ್‌, ಸಿಎಚ್‌ ಫ‌ಸೀಹಾ ಬಶೀರ್‌, ಅನೂಪ್‌ ಗುಪ್ತಾ, ಅರುಣಾ ಕುಮಾರಿ ಕೋರಿ, ಅಭಿಷೇಕ್‌ ಮಿಶ್ರಾ, ಇರ್ಫಾನಿ ಸೋಳಂಕಿ, ಯೋಗೇಶ್‌ ಪ್ರತಾಪ್‌ ಸಿಂಗ್‌, ಮೊಹಮ್ಮದ್‌ ರೆಹಾನ್‌ ನಯೀಮ್‌, ಭಾಗವತ್‌ ಶರಣ್‌ ಗಂಗ್ವಾರ್‌, ಸಂಗ್ರಾಂ ಸಿಂಗ್‌ ಯಾದವ್‌, ಅಂಭಿಕಾ ಚೌಧರಿ, ಪ್ರದೀಪ್‌ ಕುಮಾರ್‌ ದುಬೆ, ಸುಕೇಶ್‌ ಬಹಾದ್ದೂರ್‌.
SCROLL FOR NEXT