ಡೆಹ್ರಾಡೂನ್, ನವದೆಹಲಿ: ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್, ರಾಷ್ಟ್ರಪತಿ ಆಡಳಿತ ಹೇರಿಕೆಗೆ ಒಂದು ವಿಧಾನ, ನಿಯಮವೆಂಬುದಿದೆ. ಬಿಜೆಪಿಗೆ ತಕ್ಕ ಉತ್ತರ ನೀಡಲು ನಾವು ಜನರ ಬಳಿಗೆ ಹೋಗಲು ಸಿದ್ಧವಿದ್ದೇವೆ ಎಂದು ಅವರು ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಹಣಬಲ, ತೋಳ್ಬಲಗಳಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದಾರೆ. ರಾಜ್ಯಪಾಲರನ್ನು ವಜಾಗೊಳಿಸಿ ಎಂದು ಮಾಜಿ ಮುಖ್ಯಮಂತ್ರಿಗಳೊಬ್ಬರು ನಿನ್ನೆ ಕೇಳಿದ ರೀತಿ ಖಂಡನೀಯವಾದದ್ದು. ಬಲಪಂಥೀಯ ಜನರು ಪ್ರಜಾಪ್ರಭುತ್ವವನ್ನು ಕೊಲ್ಲುವ ಬಿಜೆಪಿಯ ಪ್ರಯತ್ನವನ್ನು ಖಂಡಿಸಬೇಕು ಎಂದು ಹೇಳಿದರು.
ಕಳೆದ ರಾತ್ರಿ ಬಂದ ವರದಿ ಪ್ರಕಾರ ವಿಧಾನಸಭಾಧ್ಯಕ್ಷರು ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ ನಂತರ 9 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಶಾಸಕರನ್ನು ಅನರ್ಹಗೊಳಿಸಿದರೆ ವಿಧಾನಸಭೆಯ ಸದಸ್ಯ ಬಲ 70ರಿಂದ 61ಕ್ಕೆ ಇಳಿಯುತ್ತದೆ. ಆಡಳಿತಾರೂಢ ಕಾಂಗ್ರೆಸ್ 27 ಶಾಸಕರನ್ನು ಹೊಂದಿರುತ್ತದೆ. ಅಲ್ಲದೆ ಪಿಡಿಪಿಯಿಂದ 6 ಶಾಸಕರಿರುತ್ತಾರೆ. ಒಟ್ಟು 33 ಶಾಸಕರಾಗುತ್ತಾರೆ. ನಾಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ವಿಶ್ವಾಸಮತ ಸಾಬೀತುಪಡಿಸಬೇಕು. ಬಿಜೆಪಿಯಲ್ಲಿ 28 ಶಾಸಕರಿದ್ದಾರೆ.