ನವದೆಹಲಿ: ಉತ್ತರಾಖಂಡದ ರಾಜಕೀಯ ಪರಿಸ್ಥಿತಿ ಆಡಳಿತ ಕುಸಿತಕ್ಕೆ ಒಂದು ಪಠ್ಯಪುಸ್ತಕ ಉದಾಹರಣೆಯಂತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಸಾಂವಿಧಾನಿಕ ನೀತಿ ನಿಯಮಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಮಾರ್ಚ್ 18ರಂದು ವಿಧಾನಸಭೆ ಸ್ಪೀಕರ್ ಅನುಮೋದಿಸಿದ ಸ್ವಾಧೀನತೆ ಮಸೂದೆಯನ್ನು ಘೋಷಣೆ ಮಾಡಲಾಗಿತ್ತು. ವಿಧಾನಸಭೆಯ 67 ಮಂದಿ ಶಾಸಕರಲ್ಲಿ 35 ಮಂದಿ ಮುಖ್ಯಮಂತ್ರಿ ವಿರುದ್ಧ ಮತ ಹಾಕುವುದಾಗಿ ಸ್ಪೀಕರ್ ಗೆ ಬರೆದು ಕೊಟ್ಟಿದ್ದರು ಎಂದರು.
ನಮ್ಮ ದೇಶದ 68 ವರ್ಷಗಳ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಉತ್ತರಾಖಂಡದಲ್ಲಿ ಆದಂತಹ ರಾಜಕೀಯ ಪರಿಸ್ಥಿತಿ ಎಲ್ಲಿಯೂ ತಲೆದೋರಿರಲಿಲ್ಲ. ಭಾರತದಲ್ಲಿ ಸಂಸತ್ ವ್ಯವಸ್ಥೆ ನಾಶಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಜೇಟ್ಲಿ ಪಿಟಿಐ ಸುದ್ದಿಸಂಸ್ಥೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೂ ಮುನ್ನ ಪ್ರತಿಕ್ರಿಯೆ ನೀಡಿದ್ದರು.