ದೇಶ

ಬಿಹಾರದಲ್ಲಿ ಮದ್ಯ ನಿಷೇಧ ಜಾರಿ: ಐತಿಹಾಸಿಕ ದಿನವೆಂದ ನಿತೀಶ್ ಕುಮಾರ್

Manjula VN

ಪಾಟ್ನ: ಮದ್ಯಪಾನ ಸೇವನೆ ಹಾಗೂ ಮಾರಾಟ ನಿಷೇಧಕ್ಕೆ ಬೆಂಬಲ ಸೂಚಿಸಿರುವ ಬಿಹಾರದ 243 ಶಾಸಕರು, ಇನ್ನು ಮುಂದೆ ಮದ್ಯಾಪಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಶಾಸಕರ ಹೇಳಿಕೆಗೆ ಸಂತಸ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ಶಾಸಕರ ಹೇಳಿಕೆಯಿಂದ ಮದ್ಯಪಾನ ನಿಷೇಧಕ್ಕೆ ಪ್ರತಿಯೊಬ್ಬರೂ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿರುವುದು ಇದರಿಂದ ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ.

ಮೊದಲ ಹಂತದ ನಿಷೇಧದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ರೀತಿಯ ದೇಸೀ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲಾಗುತ್ತಿದ್ದು, ಪಾಟ್ನ ಮತ್ತು ಗಯಾದಲ್ಲಿ ಮಾತ್ರ ಮದ್ಯ ದೊರಕಲಿದೆ. ಅದೂ ಕೂಡ ಸರ್ಕಾರೇತರ ಮಳಿಗೆಗಳಲ್ಲಿ ಮಾತ್ರ. ನಿಷೇಧ ಜಾರಿ ಶುಕ್ರವಾರದಿಂದ ಜಾರಿಯಾಗುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಯಾರಾದರೂ ಮದ್ಯ ಸೇವನೆ ಮಾಡಿದ್ದೇ ಆದರೆ, ಅವರಿಗೆ 5-8 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಿಹಾರ ರಾಜ್ಯದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯ ಸಂಪೂರ್ಣವಾಗಿ ನಿಷೇಧವಾಗಲಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ನಿತೀಶ್ ಕುಮಾರ್ ಸರ್ಕಾರ ಮುಂದಾಗಿದ್ದು, ಈ ಕಾರ್ಯದ ಮೊದಲ ಹಂತವಾಗಿ ಮುಂಬರುವ ಶುಕ್ರವಾರದಿಂದ ದೇಸೀ ಮದ್ಯಕ್ಕೆ ನಿಷೇಧ ಹೇರಿದೆ. ಇನ್ನು ಸರ್ಕಾರ ನಿಷೇಧ ನಿರ್ಧಾರವನ್ನು ವಿರೋಧಿಸಿ ಮದ್ಯ ಮಾರಾಟ ಅಥವಾ ಸೇವನೆ ಮಾಡುವವರಿಗೆ ಅಪರಾಧ ಪ್ರಮಾಣ ಆಧರಿಸಿ ಶಿಕ್ಷೆ ವಿಧಿಸಲಾಗುವುದು, ಗರಿಷ್ಠ ಶಿಕ್ಷೆಯ ಪ್ರಮಾಣ ಗಲ್ಲು ಶಿಕ್ಷೆಯಾಗಿರುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

2ನೇ ಹಂತದ ನಿಷೇಧ ಜಾರಿಯಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯವನ್ನು ನಿಷೇಧ ಮಾಡಲಾಗುತ್ತಿದ್ದು, ನಿಷೇಧ ಜಾರಿ 6 ತಿಂಗಳ ನಂತರ ಚಾಲನೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT