ನವದೆಹಲಿ: ಸುಮಾರು ಹತ್ತು ವರ್ಷಗಳ ನಂತರ ಕೇಂದ್ರ ಸರ್ಕಾರ ಕಡೆಗೂ ಭಾರತೀಯ ಸೇನೆಗೆ 50 ಸಾವಿರ ಗುಂಡು ನಿರೋಧ ಜ್ಯಾಕೆಟ್‌ಗಳನ್ನು ತುರ್ತಾಗಿ ನೀಡಲು ನಿರ್ಧರಿಸಿದ್ದು, ಈ ಸಂಬಂಧ 140 ಕೋಟಿ ರುಪಾಯಿಗಳ ಗುತ್ತಿಗೆಗೆ ಸಹಿ ಹಾಕಿದೆ.
ಭಾರತೀಯ ಸೇನೆ ಒಟ್ಟು 3,53,765 ಹೊಸ ಗುಂಡು ನಿರೋಧಕ ಜ್ಯಾಕೆಟ್‌ಗಳ ಅಗತ್ಯವಿದ್ದು, ಈಗ ತುರ್ತಾಗಿ 50 ಸಾವಿರ ಜ್ಯಾಕೆಟ್ ಗಳನ್ನು ನೀಡಲಾಗುತ್ತಿದೆ, ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆಂಬಂತೆ ತರಿಸಿಕೊಳ್ಳಲಾಗುತ್ತಿರುವ ಈ ಗುಂಡು ನಿರೋಧಕ ಜ್ಯಾಕೆಟ್‌ಗಳನ್ನು ಈ ವರ್ಷ ಆಗಸ್ಟ್‌ನಿಂದ ಸೈನಿಕರಿಗೆ ಪೂರೈಸಲಾಗುತ್ತಿದೆ. 2017ರ ಜನವರಿಯೊಳಗೆ ಈ ಎಲ್ಲ ಜ್ಯಾಕೆಟ್‌ಗಳನ್ನು ಪೂರೈಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತೀಯ ಸೈನಿಕರು ಈಗ ಬಳಸುತ್ತಿರುವ ಗುಂಡು ನಿರೋಧಕ ಜ್ಯಾಕೆಟ್‌ಗಳು ಭಾರೀ ತೂಕದ್ದಾಗಿದ್ದು ಅವುಗಳಿಂದ ದೊರಕುವ ರಕ್ಷಣೆ ಬಹುತೇಕ ನಗಣ್ಯವಾಗಿದೆ ಮತ್ತು ಅವುಗಳ ಬಾಳಿಕೆ ಅವಧಿ ಮುಗಿಯುತ್ತ ಬಂದಿದೆ.
11.80 ಕೋಟಿ ಭಾರತೀಯ ಸೈನಿಕರಿಗೆ ಕಳೆದ ಹತ್ತು ವರ್ಷಗಳಿಂದಲೂ ಆಧುನಿಕ ಗುಂಡು ನಿರೋಧಕ ಜ್ಯಾಕೆಟ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ರಕ್ಷಣಾ ಇಲಾಖೆಗೆ ಅವಶ್ಯವಿರುವ ಪರಿಕರಗಳನ್ನು ತರಿಸಿಕೊಳ್ಳುವವಲ್ಲಿನ ಪ್ರಕ್ರಿಯೆಗಳೇ ಜಟಿಲವಾಗಿರುವುದು ಇದಕ್ಕೆ ಕಾರಣವೆನ್ನಲಾಗಿದೆ.
2014ರ ನವೆಂಬರ್‌ನಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರಕ್ಕೆ ಬಂದ ಮನೋಹರ್ ಪರ್ರೀಕರ್ ಅವರು ಮಧ್ಯಾವಧಿ ತುರ್ತು ಖರೀದಿಗೆ ಕಂದಾಯ ಮಾರ್ಗದ ಮೂಲಕ ಅನುಮತಿ ನೀಡಿದ ಪರಿಣಾಮವಾಗಿ ಸೇನೆಯ ದೊಡ್ಡ ಕೊರತೆಯೊಂದು ಕೊನೆಗೂ ನೀಗಲು ಸಾಧ್ಯವಾಗಿದೆ.